ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಸ್ಪತ್ರೆಯ ಕೋವಿಡ್ ಕೇಸ್ ಸೆಂಟರ್ ನಲ್ಲಿನ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಗಮನಕ್ಕೆ ತಂದರು.
ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೋವಿಡ್ ಕೇರ್ ಸೆಂಟರ್ ನಲ್ಲಿನ ಅವ್ಯವಸ್ಥೆ ಬಗ್ಗೆ ಗಮನ ಸೆಳೆದರು. ಸಿಜಿ ಆಸ್ಪತ್ರೆಯಲ್ಲಿ 25 ವೆಂಟಿಲೇಟರ್ ಗಳು ಇದ್ದರೂ, ಅಗತ್ಯ ಸಿಬ್ಬಂದಿ ಇಲ್ಲದೆ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೋವಿಡ್-19 ನಿಂದ ಮೃತಪಟ್ಟ ಕುಟುಂಬಗಳಿಂದ ಅಂತ್ಯಸಂಸ್ಕಾರಕ್ಕೆ ಹಣ ಪಡೆಯಲಾಗುತ್ತಿದೆ. ವಾಹನ ಬಾಡಿಗೆ ಸಿಬ್ಬಂದಿ ಹಾಗೂ ಗುಂಡಿ ತೆಗೆಯಲು ಜೆಸಿಬಿ ಚಾರ್ಜ್ ಎಂದು ಸುಮಾರು 12 ರಿಂದ 15 ಸಾವಿರ ರೂಗಳನ್ನು ಪಡೆಯಲಾಗುತ್ತಿದ್ದು ಇದರ ಬಗ್ಗೆ ಗಮನಹರಿಸಬೇಕು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಶವಸಂಸ್ಕಾರಕ್ಕೆ ಎರಡು ವಾಹನಗಳನ್ನು ನೀಡಿದ್ದು, ಜೆಸಿಬಿ ಹಾಗೂ ಅಗತ್ಯ ಸಿಬ್ಬಂದಿಯನ್ನು ನೀಡಿದೆ. ಯಾರು ಹಣ ನೀಡಬಾರದು. ನಗರಪಾಲಿಕೆಯ ಕಮಿಷನರ್ ಗೆ ಕರೆ ಮಾಡಿ ಇದರ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.
ವೆಂಟಿಲೇಟರ್ ನಿರ್ವಹಣೆಗೆ ಸಿಬ್ಬಂದಿ ಕೊರತೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿ ವ್ಯವಸ್ಥೆ ಮಾಡಲಾಗುವುದು. ಈಗಿರುವ 25 ವೆಂಟಿಲೇಟರ್ ಗಳನ್ನು ಸೂಕ್ತ ಸಿಬ್ಬಂದಿ ಇರುವ ಬೇರೆ ಖಾಸಗಿ ಆಸ್ಪತ್ರೆಗೆ ನೀಡಲು ಸೂಚನೆ ನೀಡಿದ್ದು, ಜಿಲ್ಲಾಸ್ಪತ್ರೆಯಿಂದ ಕಳಿಸುವ ರೋಗಿಗಳಿಗೆ ಉಚಿತ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ಕೆ.ಚಮನ್ ಸಾಬ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಉಪಸ್ಥಿತರಿದ್ದರು.



