ಡಿವಿಜಿ ಸುದ್ದಿ, ಚನ್ನಗಿರಿ: ಹಗಲು ಹೊತ್ತಿನಲ್ಲಿ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 4.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ತಾವರಕೆರೆ ಕ್ರಾಸ್ ಬಳಿ ಪೋಲೀಸರು ವಾಹನ ತಪಾಸಣೆ ನಡೆಸುತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಪೋಲಿಸರನ್ನು ನೋಡುತ್ತಿದ್ದಂತೆ ಗಾಬರಿಗೊಂಡಿದ್ದಾರೆ. ತಕ್ಷಣ ಓಡಿಹೋಗಲು ಪ್ರಯತ್ನಿಸಿದ್ದಾರೆ. ಆಗ ಅವರನ್ನು ಬಂಧಿಸಿದ ಪೊಲೀಸರು, ವೃತ್ತ ನಿರೀಕ್ಷಕ ಆರ್. ಆರ್. ಪಾಟೀಲ್ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಕಳ್ಳರು ಕಳ್ಳತನ ಸತ್ಯ ಬಾಯಿ ಬಿಟ್ಟಿದ್ದಾರೆ.
ಆರೋಪಿಗಳು ಮಹಮದ್ ಮುಸ್ತಫ್ , ಜಫ್ರುಲ್ಲಾ ಖಾನ್ ಎಂದು ತಿಳಿದು ಬಂದಿದ್ದು ಚನ್ನಗಿರಿ ವ್ಯಾಪ್ತಿ ಮತ್ತು ದಾವಣಗೆರೆಯ ಹದಡಿ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ 118 ಗ್ರಾಂ ಚಿನ್ನ ಹಾಗೂ 350 ಗ್ರಾಂ ಬೆಳ್ಳಿ ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಮೂಲತಃ ಶಿವಮೊಗ್ಗ ವಾಸಿಗಳಾಗಿದ್ದಾರೆ. ಸದ್ಯ ಚನ್ನಗಿರಿಯ ಪೋಲಿಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಚನ್ನಗಿರಿ ಪಿಎಸ್ಐ ಗಳಾದ ಆಶಾ , ರೂಪ್ಲಿಬಾಯಿ , ಕಾರ್ಯಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಾದ ಧರ್ಮಪ್ಪ , ರುದ್ರೇಶ್ , ಮಂಜುನಾಥ್ ಪ್ರಸಾದ್ , ಪ್ರವೀಣ್ ಗೌಡ , ಮಹಮದ್ ರಫಿಕ್ , ಪರಶುರಾಮ್ ಉಪಸ್ಥಿತರಿದ್ದರು.