ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಸಿಸಿಬಿ ದಾಳಿ ಮಾಡಿದ್ದಾರೆ. ಇನ್‍ಸ್ಪೆಕ್ಟರ್ ಅಂಜುಮಾಲಾ ನಾಯ್ಕ್, ಪನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಆದಿತ್ಯ ಆಳ್ವಾ ಮಾಜಿ ಸಚಿವ ಜೀಬರಾಜ್ ಆಳ್ವಾ ಅವರ ಪುತ್ರನಾಗಿದ್ದಾನೆ. ನಟ ವಿವೇಕ್ ಓಬೇರಾಯ್ ಅವರ ಮೈದುನನಾಗಿದ್ದಾನೆ.
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನದ ನಂತರ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈಯಲ್ಲಿರುವ ಅನುಮಾನಗಳು ವ್ಯಕ್ತವಾಗಿದೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದದ್ದರು. ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂದು ತಿಳಿಸಿದು ಬಂದಿದೆ.

ಆದಿತ್ಯ ಆಳ್ವಾ ಮನೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮನೆಯ ಮೇಲೆಯೂ ಸಿಸಿಬಿ ದಾಳಿ ನಡೆಸಿತ್ತು. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದೆ. ಇದೇ ಮನೆಯಲ್ಲಿ ವೀಕೆಂಡ್ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಸಿಸಿಬಿ ಬಂಧಿಸಿರುವ ಆರು ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.
ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ಡ್ರಗ್ ಮಾತ್ರೆಗಳನ್ನು ವೈಭವ್ ಜೈನ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಕುರಿತು ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು ಎಂದು ಆರೋಪಿ ರವಿಶಂಕರ್ ಬಾಯಿಬಿಟ್ಟಿದ್ದಾನೆ.




