ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್-19 ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ರೂ. 5,000 ಗಳ ಪರಿಹಾರ ಧನವನ್ನು ನೀಡಲು ಮುಂದಾಗಿದ್ದು, ಈ ವಾಹನಗಳ ಚಾಲಕರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿಯೇ ಸಲ್ಲಿಸಬೇಕು. ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು ಪರವಾನಿಗೆ ಪತ್ರ, ಬ್ಯಾಡ್ಜ್ , ನೋಂದಣಿ ಸಂಖ್ಯೆ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳು ಆಟೋರಿಕ್ಷಾ/ಟ್ಯಾಕ್ಸಿ ಚಾಲಕರಾಗಿದ್ದು ದಿನಾಂಕ: 24-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಪರವಾನಿಗೆ ಪತ್ರ ಮತ್ತು ಸುಸ್ಥಿತಿ ಪ್ರಮಾಣ ಪತ್ರ ವಿವರಗಳನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ನಮೂದಿಸಬೇಕು.
ಚಾಲಕರ ಆಧಾರ ಕಾರ್ಡ್, ಬ್ಯಾಂಕ್ ಖಾತೆ ವಿವರ, ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್ ತಪ್ಪದೇ ಪೋರ್ಟಲ್‍ನಲ್ಲಿ ನಮೂದಿಸಬೇಕು. ಚಾಲಕರ ವಾಹನ ನೋಂದಣಿ ಸಂಖ್ಯೆ ನಮೂದಿಸಬೇಕು ಹಾಗೂ ಆಟೋರಿಕ್ಷಾ/ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗ ನಡೆಸಲಾಗದೇ ಆದಾಯ ಕಳೆದುಕೊಂಡ ಬಗ್ಗೆ ಪೋರ್ಟಲ್‍ನಲ್ಲಿ ಸ್ವಯಂ ಘೋಷಣೆ ಪತ್ರವನ್ನು ನಮೂದಿಸಬೇಕು ಎಂದು ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.