ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ ರೀಡಿಂಗ್ ಸಾಧ್ಯವಾಗಿರುವುದಿಲ್ಲ. ಹೀಗಾಗಿ ಸರ್ಕಾರದ ಆದೇಶದ ಅನ್ವಯ ಕಳೆದ ಹಿಂದಿನ ಮೂರು ತಿಂಗಳಿನ ಬಿಲ್‍ನ್ನು ಆಧರಿಸಿ ಸರಾಸರಿ ಬಿಲ್ ನೀಡಲಾಗುತ್ತಿದೆ ಎಂದು ದಾವಣಗೆರೆ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ. ಪಟೇಲ್ ತಿಳಿಸಿದ್ದಾರೆ.
ಮೇ ತಿಂಗಳ ರೀಡಿಂಗ್ ಸಾಧ್ಯವಾಗದ ಕಾರಣ ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಬಿಲ್ ಒಟ್ಟಿಗೆ ಮಾಡಲಾಗಿರುತ್ತದೆ. ಈ ಹಿಂದೆ ಏಪ್ರಿಲ್ ತಿಂಗಳ ಮಾಹೆಯಲ್ಲಿ ಮಾಡಲಾಗಿರುವ ಸರಾಸರಿ ಬಿಲ್ಲನ್ನು ತೆಗೆದು ಹಾಕಲಾಗಿರುತ್ತದೆ. ಏಪ್ರಿಲ್ ತಿಂಗಳಲ್ಲಿ ಮೊತ್ತವನ್ನು ಪಾವತಿಸಿದ್ದಲ್ಲಿ, ಪಾವತಿಸಲಾದ ಮೊತ್ತವನ್ನು ಮೇ ತಿಂಗಳ ಬಿಲ್ಲಿನಲ್ಲಿ ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗಿರುತ್ತದೆ. ಗ್ರಾಹಕರಿಗೆ ಅಧಿಕ ಹೊರೆ ಆಗದಂತೆ ಎರಡೂ ತಿಂಗಳಿಗೆ ಸಮನಾಗಿ ಯೂನಿಟ್ ಬಳಕೆ ವಿಂಗಡಿಸಿ ಸ್ಲ್ಯಾಬ್‍ನ್ನು ಸಮಾನವಾಗಿ ಹಂಚಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಅವೈಜ್ಷಾನಿಕವಾಗಿ ಬಿಲ್ ನೀಡಿದ್ದರಿಂದ ಗ್ರಾಹಕರು ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಬೆಸ್ಕಾಂ ಮೂರು ತಿಂಗಳ ಸರಾಸರಿ ಬಿಲ್ ನೀಡುವುದಾಗಿ ತಿಳಿಸಿದೆ.



