ಡಿವಿಜಿ ಸುದ್ದಿ, ದಾವಣಗೆರೆ: ದಿನದ 24 ತಾಸಿನಲ್ಲಿ ಒಂದು ನಿಮಿಷವಾದರೂ ಬಸವಣ್ಣನವರಾಗುವ ಪ್ರಯತ್ನವನ್ನು ನಾವೆಲ್ಲ ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಬಸವೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಬಸವರೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮಾತನಾಡಿದರು.
ಸ್ವಾರ್ಥ ಮತ್ತು ದ್ವೇಷ ಅಸೂಯೆ ಮನದಲ್ಲಿ ಇಟ್ಟುಕೊಂಡು ಎಷ್ಟು ಪೂಜೆ ಮಾಡಿದರೂ ಪ್ರಯೋಜನವಿಲ್ಲ. ಬದಲಾಗಿ ನಿಸ್ವಾರ್ಥ ಕಾಯಕದಲ್ಲಿ ತೊಡಗಿ ಕಾಯಕದಲ್ಲಿ ದೇವರನ್ನು ಕಾಣಬೇಕು. ದಾವಣಗೆರೆಯವರಾದ ಹಿರಿಯರಾದ ಹರ್ಡೇಕರ್ ಮಂಜಪ್ಪನವರು ಆರಂಭಿಸಿದ ಈ ಜಯಂತಿಯನ್ನು ದಾವಣಗೆರೆಯಲ್ಲೇ ಸರಳವಾಗಿ ಆಚರಿಸುತ್ತಿರುವುದು ಹಾಗೂ ಇಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡ ನನ್ನ ಸೌಭಾಗ್ಯ ಎಂದರು.
ಬಸವ ಬಳಗದ ಸಂಚಾಲಕ ಸಿದ್ದರಾಮಣ್ಣ ಮಾತನಾಡಿ, ನಾವೆಲ್ಲಾ ಬಸವನ ಹೃದಯ ಬಳ್ಳಿಗಳು. ಜಗತ್ತಿಗೇ ಬೆಳಕು ನೀಡಿದ ಜಗಜ್ಯೋತಿ ಬಸವಣ್ಣನವರು ನುಡಿದಂತೆ ನಡೆದ ಮಹಾನ್ ಚೇತನ. ಎಲ್ಲ ಜಾತಿ, ಧರ್ಮ, ಮತದವರನ್ನು ಒಟ್ಟುಗೂಡಿಸಿ ಸಮಾನತೆಯನ್ನು ಎತ್ತಿ ಹಿಡಿದವರು. ಕಾಯಕದಲ್ಲಿ ದೇವರನ್ನು ಕಂಡು ಕಾಯವೇ ಕೈಲಾಸವೆಂದು ಸಾರಿದ ಬಸವಣ್ಣನವರು ನಮ್ಮ ನಿಮ್ಮೆಲ್ಲರೂ ಮಧ್ಯೆಯೂ ಇರಬೇಕು. ಎಲ್ಲಿ ನೋಡಿದರಲ್ಲಿ ಬಸವಣ್ಣ ಕಾಣಬೇಕು. ಜಿಲ್ಲಾಧಿಕಾರಿಗಳೂ ಬಸವ ತತ್ವಗಳನ್ನು ಪಾಲಿಸುತ್ತ ಆಡಳಿತ ಕೈಂಕರ್ಯದಲ್ಲಿ ತೊಡಗಿಕೊಂಡಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಸಿಇಓ ಪದ್ಮಾ ಬಸವಂತಪ್ಪ, ಬಸವ ಬಳಗದ ಅಧ್ಯಕ್ಷ ಹೆಚ್.ಎಂ.ಸ್ವಾಮಿ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಬಸವ ಬಳಗದ ಪದಾಧಿಕಾರಿಗಳು ಇದ್ದರು.



