ಡಿವಿಜಿ ಸುದ್ದಿ, ಹರಪನಹಳ್ಳಿ: ರಾಜ್ಯದಲ್ಲಿ ಮಠಧೀಶರು, ರಾಜಕಾರಣಿಗಳು, ಬುದ್ಧಿ ಜೀವಿಗಳಿಗೆ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದು, ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ತಪ್ಪಿತಸ್ಥರ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಶ್ರೀ ನಿಜಗುಣನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾಸ್ವಾಮಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಸೇರಿದಂತೆ ಅನೇಕರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದ್ದು, ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ಕೇಂದ್ರ ಸರ್ಕಾರ ರಾಜ್ಯ ಸರ್ಕಾಕ್ಕೆ ಸರಿಯಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಹಿಂದೆ ಪ್ರತಿ ಶಾಸಕರಿಗೆ 2 ಕೋಟಿ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಈಗ ಕೇಲವ 50 ಲಕ್ಷ ಬಿಡುಗಡೆಯಾಗುತ್ತಿದೆ ಎಂದರು.
ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸುವ ಮೊದಲು ಶ್ವೇತ ಪತ್ರ ಹೊರಡಿಸಬೇಕು. ಮುಸ್ಲಿಂ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ಖಂಡನಾರ್ಹ, ಕೋಮುವಾದ ವಿಷ ಬೀಜ ಬಿತ್ತುತ್ತಿರುವರಿಗೆ ಜನ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ಕಾಂಗ್ರೆಸ್ ಮುಖಂಡರಾದ ರೆಹಮಾನ್ ಸಾಬ್, ಎಂ.ವಿ. ಅಂಜನಪ್ಪ, ಯೂನೂಸ್ ಸವಣೂರು, ವೆಂಕಟೇಶ್, ಜಾಕೀರ್ ಹುಸೇನ್, ಚಿಕ್ಕೇರಿ ಬಸಪ್ಪ, ವಾಗೀಶ್, ಮತ್ತೂರು ಬಸವರಾಜ್, ಉದಯಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.