ಡಿವಿಜಿ ಸುದ್ದಿ, ದಾವಣಗೆರೆ: ಸದಾ ರೈತರ ಪರ ಸರ್ಕಾರ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಬಿಜೆಪಿ ಸರ್ಕಾರ. ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕಿನ ರೈತರಿಗೆ ಒಂದು ನ್ಯಾಯ, ಇನ್ನುಳಿದ ಮೂರು ತಾಲೂಕಿನ ರೈತರಿಗೆ ಮತ್ತೊಂದು ನ್ಯಾಯವನ್ನು ಪ್ರದರ್ಶಿಸುತ್ತಾ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ ಆರೋಪಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಗೆ ಹೊಸದಾಗಿ ಅಡಿಕೆ ಸಸಿ ಹಾಕಲು ಪ್ರತಿ ಎಕರೆಗೆ 80 ಸಾವಿರ ರೂಗಳನ್ನು ನೀಡಲಾಗುತ್ತಿದೆ. ಒಬ್ಬ ಫಲಾನುಭವಿಗೆ 2 ಲಕ್ಷ ರೂಪಾಯಿಗಳ ವರೆಗೂ ಹಣ ನೀಡಲು ಅವಕಾಶವಿದೆ. ಆದರೆ, ಈ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತರಿಗೆ ಅನ್ವಯ ಮಾಡಿಲ್ಲ ಎಂದು ಪ್ರಶ್ನಿಸಿದ್ಧಾರೆ.

ಕೇವಲ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳಿಗೆ ಮಾತ್ರ ಸೀಮಿತವಾಗಿಸಲಾಗಿದೆ. ಇನ್ನುಳಿದ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲೂಕುಗಳನ್ನು ಕೈ ಬಿಟ್ಟಿದ್ದು ಖಂಡನೀಯ. ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಸಹ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರು ಶಿಫಾರಸ್ಸಿನ ಮೇರೆಗೆ ಕಾರ್ಯರೂಪಕ್ಕೆ ಬಂದಿದೆ.
ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಮ್ಮ ಸಂಸದರು ಇದರ ಬಗ್ಗೆ ಗಮನಹರಿಸಿ ಜಿಲ್ಲೆಯ ಎಲ್ಲಾ ರೈತರುಗಳಿಗೆ ಯೋಜನೆಯ ನೆರವು ದೊರೆಯುವಂತೆ ಮಾಡಬೇಕಾಗಿದೆ.ಸರ್ಕಾರ ಹಣ ನೀಡುತ್ತದೆ, ಅದನ್ನು ಕೆಲವೇ ಸೀಮಿತ ವ್ಯಾಪ್ತಿಗೆ ಮಾಡದೇ ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡಬೇಕಾದ ಕರ್ತವ್ಯ ಜನಪ್ರತಿನಿಧಿಗಳದ್ದಾಗಿದೆ.
ಚನ್ನಗಿರಿಯ ನಂತರ ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುತ್ತಿದ್ದು ಇಲ್ಲಿಯ ರೈತರಿಗೂ ಸಹ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಜಗಳೂರು ತಾಲೂಕನ್ನು ಕೇವಲ ಹಿಂದುಳಿದ ತಾಲೂಕು ಎಂದು ಕಣ್ಣೊರೆಸುವ ಕೆಲಸ ಮಾಡದೆ ಈ ತರಹದ ಯೋಜನೆಗಳನ್ನು ತಾಲ್ಲೂಕಿನ ರೈತರಿಗೆ ನೀಡಿದರೆ ಅವರು ಸಹ ಆರ್ಥಿಕವಾಗಿ ಸಹಾಯ ಮಾಡಿದಂತಾಗುತ್ತಿದೆ. ಸಂಸದರು ಕೇವಲ ಮೂರು ತಾಲೂಕುಗಳಿಗೆ ಮಾತ್ರ ಸಂಸದರಲ್ಲ, ಜಿಲ್ಲೆಯ ಸಂಸದರು ಕೂಡಲೇ ಗ್ರಾಮೀಣಾಭಿವೃದ್ಧಿ ಸಚಿವರ ಮೂಲಕ ಪ್ರಭಾವ ಬಳಸಿ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ದೊರೆಯುವಂತೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ಧಾರೆ.



