ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರಿಗೆ ಸೆಕ್ಯೂರಿಟಿ ಏಜೆನ್ಸಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಿಗಟೇರಿ ಜಿಲ್ಲಾಸ್ಪತ್ರೆಯ ದಿನಗೂಲಿ ನೌಕರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವರ್ಷದಿಂದ ಗುತ್ತಿಗೆ ಏಜೆನ್ಸಿ ನಡೆಸುತ್ತಿದ್ದು, ಕಿರುಕುಳ ನೀಡುತ್ತಿದ್ದಾರೆ. 15 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮನ್ನು ಬಿಡಿಸುವ ಕುತಂತ್ರ ನಡೆಯುತ್ತಿದೆ. 6 ತಿಂಗಳಿನಿಂದ ಅನೇಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಅವರ ಹೆಸರು ಹಾಜರಿಯಲ್ಲಿ ಮಾತ್ರ ಇರುತ್ತದೆ.ಆದರೆ ಅವರುಗಳು ಯಾವತ್ತು ಕೆಲಸಕ್ಕೆ ಬಂದಿರಲಿಲ್ಲ,ಈಗ 54 ಜನರನ್ನು ಕೆಲಸದಿಂದ ಬಿಡಿಸಿದ್ದು, ನಾವು 16 ವರ್ಷದಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದೇವೆ ಎಂದರು.
ಈಗಾಗಲೇ ಎಷ್ಟೋ ಜನ ಗುತ್ತಿಗೆ ಕಾರ್ಮಿಕರು ಮರಣ ಹೊಂದಿದ್ದು, ಕೆಲವೊಬ್ಬರು ಅನಾರೋಗ್ಯದಿಂದ ಮನೆಯಲ್ಲಿದ್ದಾರೆ. ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಇಲ್ಲಿ ಕೆಲಸ ಮಾಡುವವರಿಗೆ ಸರ್ಕಾರದ ಭದ್ರತೆ ಕೊಡಬೇಕು. ಕೆಲಸ ಖಾಯಂ ಮಾಡಿಕೊಳ್ಳಬೇಕು ಎನ್ನುವ ಸಮಯದಲ್ಲಿ ಗುತ್ತಿಗೆ ನಡೆಸುವ ಮ್ಯಾನೇಜರ್ ಮಂಜುನಾಥ್ ಎನ್, ಅರುಣ್, ರಾಜಪ್ಪ ಎನ್ನುವವರು ತಮ್ಮ ಸಂಬಂಧಿಕರ ಹೆಸರನ್ನು ಅನಧಿಕೃತವಾಗಿ ಸೇರ್ಪಡೆ ಮಾಡಿರುತ್ತಾರೆ ಎಂದು ಆರೋಪಿಸಿದರು.
15 ವರ್ಷದಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ನಮ್ಮನ್ನು ಬಿಡಿಸಿರುವುದರಿಂದ ಕಾರ್ಮಿಕರಲ್ಲಿ ಒಬ್ಬರಾದ ರಂಗಸ್ವಾಮಿ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ನಮಗೆಲ್ಲರಿಗೂ ಮಾನಸಿಕವಾಗಿ ಹಿಂಸೆಯಾಗಿದ್ದು, ಕೂಡಲೇ ಏಜೆನ್ಸಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಲತೇಶ್, ಸುರೇಂದ್ರ, ಕರಿಬಸಪ್ಪ, ಕಮಲಮ್ಮ, ದುಗ್ಗಮ್ಮ, ವಿನೋದಬಾಯಿ, ಶಾಂತಮ್ಮ, ರೇಣುಕಮ್ಮ ಸೇರಿದಂತೆ ಮತ್ತಿತರರಿದ್ದರು.