ಡಿವಿಜಿ ಸುದ್ದಿ, ಬೆಂಗಳೂರು: ಈ ವರ್ಷ ರೈತರಿಂದ ಆ್ಯಪ್ ಮೂಲಕ ಪ್ರಾಯೋಗಿಕವಾಗಿ ಬೆಳೆ ಸಮೀಕ್ಷೆ ನಡೆಸಿದ್ದು, ಮುಂದಿನ ವರ್ಷದಿಂದ ರೈತರೇ ಕಡ್ಡಾಯವಾಗಿ ಸಮೀಕ್ಷೆ ನಡೆಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಜಿಕೆವಿಕೆ ಕೇಂದ್ರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ ಕೆಲವೊಂದು ತೊಡಕು ನಡುವೆಯೂ ಪ್ರಾಯೋಗಿಕ ಬೆಳೆ ಸಮೀಕ್ಷೆ ಯಶಸ್ವಿಯಾಗಿದೆ ಎಂದರು.
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೈತರು ಆ್ಯಪ್ ಮೂಲಕ ತಪ್ಪದೇ ಬೆಳೆ ಸಮೀಕ್ಷೆ ನಡೆಸಬೇಕು. ಹೆಚ್ಚು ಹೆಚ್ಚು ರೈತರು ಬೆಳೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಈ ವರ್ಷ ಉತ್ತಮ ಮಳೆಯಾಗಿದ್ದು, ವಾಡಿಕೆಗಿಂತ ಶೇ 101 ರಷ್ಟು ಬಿತ್ತನೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿಯವರೂ ಸಹ ಆಹಾರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡುತ್ತಿದ್ದಾರೆ . ಕೃಷಿ ಅಧಿಕಾರಿಗಳು ರೈತರ ಸ್ನೇಹಿತರಾಗಬೇಕೇ ಹೊರತು ವ್ಯಾಪಾರಿಗಳ ಸ್ನೇಹಿಗಳಾಗಬಾರದು ಎಂದರು.
ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಯೂರಿಯಾ, ರಸಗೊಬ್ಬರಕ್ಕೆ ಕೊರತೆಯಿಲ್ಲ. ಕಾಳಸಂತೆಕೋರರು ಮತ್ತು ಸುಳ್ಳು ಸುದ್ದಿಹಬ್ಬಿಸುವವರ ವಿರುದ್ಧ ಕ್ರಮ ಗೆದುಕೊಳ್ಳಲಾಗುವುದು ಎಂದರು.



