ಡಿವಿಜಿ ಸುದ್ದಿ, ಬೆಂಗಳೂರು: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಮನನೊಂದು ಯುವತಿ (ಅಂಗನವಾಡಿ ಶಿಕ್ಷಕಿ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ನಡೆದಿದೆ.
ಪವಿತ್ರ (27) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಪವಿತ್ರ, ನಾಗೇಶ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಪ್ರಿಯಕರ ನಾಗೇಶ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಆತ ಮೋಸ ಮಾಡಿದ್ದಾನೆ ಎಂದು ಮನನೊಂದು ಡೆತ್‍ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರವಿತ್ರ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಾಸರಹಳ್ಳಿ ನಿವಾಸಿಸುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಾಗೇಶ್ ಮತ್ತು ಪವಿತ್ರ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ನಾಗೇಶ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಾಗೇಶ್ ಅನೇಕ ಬಾರಿ ಪೋಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದನು. ಆದರೂ ಪೋಷಕರು ಒಪ್ಪಿಗೆ ಸೂಚಿಸಿಲ್ಲ. ಕೊನೆಗೆ ಒಂದು ತಿಂಗಳ ಹಿಂದೆ ನಾಗೇಶ್ ಪೋಷಕರು ತೋರಿಸಿದ್ದ ಯುವತಿಯನ್ನು ಮದುವೆಯಾಗಿದ್ದನು.
ನಂತರ ತನ್ನ ಮದುವೆ ಫೋಟೋವನ್ನು ನಾಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ನೋಡಿದ ಪವಿತ್ರ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ನಾಗೇಶ್‍ನ ಮಾತನಾಡಿಸಿದಾಗ ಆತ ಯಾವುದೇ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾನೆ. ಇದರಿಂದ ಪವಿತ್ರಾ ಮತ್ತಷ್ಟು ನೊಂದಿದ್ದಳು. ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮನೆಗೆ ವಾಪಸ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡೆತ್‍ನೋಟ್‍ನಲ್ಲಿ ತನ್ನ ಸಾವಿಗೆ ನಾಗೇಶ್ ಕಾರಣ ಎಂದು ಪವಿತ್ರ ಬರೆದಿದ್ದಾಳೆ.
ಮಾಗಡಿ ರೋಡ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಿಯಕರ ನಾಗೇಶ್‍ನನ್ನ ಮಾಗಡಿರೋಡ್ ಪೊಲೀಸರು ಬಂಧಿಸಿದ್ದಾರೆ.



