ಡಿವಿಜಿ ಸುದ್ದಿ, ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟ್ ಮಾಜಿ ನಾಯಕ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ನಟ ರಮೇಶ್ ಅರವಿಂದ್ ನಟಿಸಿರುವ ಶಿವಾಜಿ ಸುರತ್ಕಲ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗಾಗಿ ಚಿತ್ರ ತಂಡ ಮಲ್ಲೇಶ್ವರದ ಎಸ್‍ಆರ್ ವಿ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ತಮ್ಮ ಬ್ಯುಸಿ ಷೆಡ್ಯೂಲ್ ಮಧ್ಯೆ ಬಿಡುವು ಮಾಡಿಕೊಂಡು ರಾಹುಲ್ ದ್ರಾವಿಡ್ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ನಂತರ ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ರಮೇಶ್ ಅರವಿಂದ್ ಅವರ ಜೊತೆ ಅಭಿಪ್ರಾಯ ಹಂಚಿಕೊಂಡ ದ್ರಾವಿಡ್, ಚಲನಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ನನ್ನ ಬೆರಗುಗೊಳಿಸಿತು. ಕ್ಲೈಮ್ಯಾಕ್ಸ್ ಎಲ್ಲರನ್ನು ಆಶ್ಚರ್ಯಗೊಳಿಸುವುದು ನಿಶ್ಚಿತ. ಸಿನಿಮಾ ಯಶಸ್ವಿಯಾಗಲಿ ಎಂದರು.

ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆ. 21ರಂದು ‘ಶಿವಾಜಿ ಸುರತ್ಕಲ್’ ರಾಜ್ಯಾದ್ಯಂತ ತೆರೆಗೆ ಬರಲಿದೆ. ರಮೇಶ್ ತನಿಖಾಧಿಕಾರಿ ಪಾತ್ರ ಮಾಡಿದ್ದು, ಅವರ ಪತ್ನಿ ಪಾತ್ರದಲ್ಲಿ ನಟಿ ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದಾರೆ. ನಟಿ ಆರೋಹಿ ನಾರಾಯಣ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ವೈದ್ಯೆ ಪಾತ್ರ ನೀಡಲಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶ, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಎ ಕೇಸ್ ಆಫ್ ರಣಗಿರಿ ರಹಸ್ಯ ಟ್ಯಾಗ್‍ಲೈನ್‍ನ ಶಿವಾಜಿ ಸುರತ್ಕಲ್ ಪೋಸ್ಟರ್, ಟೀಸರ್, ಟ್ರೇಲರ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದೆ.



