ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಗೆ ಸಿಪಿಐನಿಂದ 6 ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಿಪಿಐ ಜಿಲ್ಲಾಮಂಡಳಿ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್ ನಂ. 3 ರಲ್ಲಿ ಸೈಯದ್ ಮರ್ದಾನ್ ಸಾಬ್, 17 ರಲ್ಲಿ ಎಂ.ಜಿ.ಶ್ರೀಕಾಂತ್, 19 ರಲ್ಲಿ ರಂಗನಾಥ್, 28 ರಲ್ಲಿ ಹೆಚ್. ಜಿ.ಉಮೇಶ್, ವಾರ್ಡ್ 30 ಮಂಜುಳಾ ಹಾಗೂ 31 ರಲ್ಲಿ ಆವರಗೆರೆ ವಾಸು ಸ್ಪರ್ಧಿಸಲಿದ್ದಾರೆ. ಕೇವಲ 6 ವಾರ್ಡ್ ಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.
ಈ ಮೊದಲು ನಗರಸಭೆ ಆಡಳಿತದಲ್ಲಿ ಸಿಪಿಐ ಪಕ್ಷ ಸಮರ್ಥವಾಗಿ ಕೆಲಸ ನಿರ್ವಹಿಸಿದೆ. ೧೫ ವರ್ಷಗಳ ಆಡಳಿತದವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಲಾಗಿದೆ. ಮುಖ್ಯವಾಗಿ ನಗರದ ರಸ್ತೆಗಳಲ್ಲಿ 15 ಸಾವಿರ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ವಹಿಸಲಾಗಿತ್ತು. ಇದಲ್ಲದೆ ಬಡವರಿಗೆ ನಗರದ ಹಲವೆಡೆ ನಿವೇಶನ ಗುರುತಿಸಿ ಅತ್ಯಲ್ಪ ದರದಲ್ಲಿ ನೀಡಲಾಗಿತ್ತು.
ಇದನ್ನೆಲ್ಲಾ ದಾವಣಗೆರೆ ಜನತೆ ಪರಿಗಣಿಸಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಂ.ಜಿ.ಶ್ರೀಕಾಂತ್, ರಂಗನಾಥ್, ಹೆಚ್.ಜಿ.ಉಮೇಶ್, ಮಂಜುಳಾ, ಆವರೆಗೆರೆ ವಾಸು, ಸರೋಜಮ್ಮ, ಎಂ.ಹೆಚ್.ರಾಮಪ್ಪ, ತಂಗವೇಲು ಮತ್ತಿತರರು ಇದ್ದರು.



