ಡಿವಿಜಿ ಸುದ್ದಿ, ಚಾಮರಾಜನಗರ: ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕಿತರಿರುವ ತಮಿಳುನಾಡು, ಕೇರಳ ಹಾಗೂ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 60 ದಿನಗಳಿಂದ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲಿಯೇ ಮುಂದುವರಿಯುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೊರೊನಾ ವ್ಯಾಪಿಸಿದೆ. ಕೊರೊನಾ ಕಾಣಿಸಿಕೊಳ್ಳದ ಏಕಮಾತ್ರ ಜಿಲ್ಲೆಯಾಗಿ ಚಾಮರಾಜನಗರ ಉಳಿದುಕೊಂಡಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅಧಿಕಾರಿ ವರ್ಗದ ಶ್ರಮ, ಜಿಲ್ಲೆಯ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದುಳಿದ ಜಿಲ್ಲೆ, ಈ ನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಹೊಂದಿರುವ ಗಡಿಜಿಲ್ಲೆ ಕೊರೊನಾ ವಿಚಾರದಲ್ಲಿ ಮಾದರಿ ಜಿಲ್ಲೆಯಾಗಿದೆ. ಇಲ್ಲಿಯವರೆಗೆ ಕೊರೊನಾ ಕಾಣಿಸಿಕೊಳ್ಳದ ಜಿಲ್ಲೆಗಳಾಗಿ ರಾಮನಗರ ಹಾಗೂ ಚಾಮರಾಜನಗರ ಮಾತ್ರ ಇದ್ದವು. ಆದರೆ ರಾಮನಗರಕ್ಕೆ ತಮಿಳುನಾಡಿನಿಂದ ಬಂದಿದ್ದ ಕುಟುಂಬದ ಒಂದು ಮಗುವಿಗೆ ಸೋಂಕು ದೃಢಪಟ್ಟಿದ. ಹೀಗಾಗಿ ಚಾಮರಾಜನಗರ ಕೊರೊನಾ ಕಾಣಿಸಿಕೊಳ್ಳದ ಜಿಲ್ಲೆಯಾಗಿ ಉಳಿದುಕೊಂಡಿದೆ.



