ಡಿವಿಜಿ ಸುದ್ದಿ, ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದ್ದು, ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ ಎಂದರು.
ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಅವರು ಶಿರಾದಿಂದ ಬಸ್ಸಿನಲ್ಲಿ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಜ್ವರ ವಾಸಿಯಾಗಿರಲಿಲ್ಲ. ಕೊನೆಗೆ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ಕೊರೊನಾದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ತಡರಾತ್ರಿ ಕೊರೊನಾ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಪಾಸಿಟಿವ್ ವರದಿ ಬಂದ ಮರುದಿನ ಬೆಳಗ್ಗೆಯೇ ವೃದ್ಧ ಮೃತಪಟ್ಟಿದ್ದಾರೆ.
ವೃದ್ಧನ ಕುಟುಂಬದಲ್ಲಿ ಮೂವರು ಪತ್ನಿಯರು ಮತ್ತು 16 ಮಕ್ಕಳು ಸೇರಿದಂತೆ 25 ಮಂದಿ ಇದ್ದು, ಅವರನ್ನು ಐಸೋಲೇಶನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ವೃದ್ಧ 33 ಮಂದಿ ಜೊತೆ ಸಂಪರ್ಕ ಹೊಂದಿದ್ದರು. ಅವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಮೊದಲು ಕಲಬುರಗಿಯಲ್ಲಿ ವೃದ್ಧನೊಬ್ಬ ಮೃತಪಟ್ಟಿದ್ದನು. ನಂತರ ಗೌರಿಬಿದನೂರು ಮಹಿಳೆ, ಇಂದು ತುಮಕೂರಿನ ಶಿರಾ ಮೂಲದ ವೃದ್ಧ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲಗಲಿ ಕೊರೊನಾಗೆ ಮೂವರು ಸಾವನ್ನಪ್ಪಿದ್ದಾರೆ



