ಡಿವಿಜಿ ಸುದ್ದಿ, ಶಿವಮೊಗ್ಗ: ಕೊರೊನಾ ವೈರಸ್ ನಿಯಂತ್ರಣ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಎಚ್ಚರಿಕೆ ಕ್ರಮ ವಹಿಸಿದರೂ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕೊರೊನಾ ಬಂದಾಗಿನಿಂದ ಎಚ್ಚರಿಕೆ ವಹಿಸಿ ಅಂತ ನೂರು ಬಾರಿ ಹೇಳಿದರೂ ಜನರು ಗಮಹರಿಸದಿದ್ದರೆ, ಸರ್ಕಾರ ಏನು ಮಾಡಲು ಸಾಧ್ಯ ಎಂದರು.
ಶಿವಮೊಗ್ಗ ಜಿಲ್ಲಾಡಳಿತ ಕೊರೊನಾ ಜಾಗೃತಿ ಮೂಡಿಸಲು ಸಾಕಷ್ಟು ಶ್ರಮ ಹಾಕುತ್ತಿದೆ. ಹೀಗಾಗಿ ಜನರಿಗೆ ನಾನು ಮತ್ತೊಮ್ಮೆ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಬೇಜವಾಬ್ದಾರಿತನ ನಿಮಗೆ ವೈಯಕ್ತಿಕವಾಗಿ ತೊಂದರೆ ಆಗುತ್ತೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಕೊರೊನಾ ಓಡಿಸಬೇಕಿದೆ ಎಂದು ತಿಳಿಸಿದರು.



