ಡಿವಿಜಿ ಸುದ್ದಿ, ಶಿವಮೊಗ್ಗ: ಕೊರೊನಾ ಲಾಕ್ ಡೌನ್ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಸಲುವಾಗಿ ಕ್ರಿಯಾಶೀಲರಾಗಿ ಕಾರ್ಯಮಗ್ನರಾಗಿರುವ ಎಂ ಎಲ್ ಸಿ ಎಸ್. ರುದ್ರೇಗೌಡರವರು ಇಂದು ನಾಲ್ಕನೇ ಹಂತವಾಗಿ 500 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್. ರುದ್ರೇಗೌಡರವರು ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಗಳು ಉತ್ತಮ ಕಾರ್ಯ ನಿರ್ವಹಣೆಯ ಸ್ಥಿತಿ ಮನಗಂಡು ರಾಜ್ಯವು ಕೊರೊನಾ ನಿಯಂತ್ರಣದಲ್ಲಿ 2 ನೇ ಸ್ಥಾನ ಪಡೆದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಿಧಾನ ಸಭೆಯಿಂದ ವಿಧಾನ ಪರಿಷತ್ ಶಾಸಕನಾಗಿ ಆಯ್ಕೆಯಾಗಿರುವ ನನಗೆ ರಾಜ್ಯದ ವಿವಿದೆಡೆಗಳಿಂದ ಸಹಾಯ ಕೋರಿ ಮನವಿಗಳು ನಿರಂತರವಾಗಿ ಬರುತ್ತಿದ್ದು, ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್ -19 ಖಾತೆಗೆ 26 ಲಕ್ಷರೂಗಳನ್ನು ದೇಣಿಗೆ ನೀಡಿದ್ದೇನೆ. ಶಿವಮೊಗ್ಗ ನಗರದ ಬಡವರ ಸಂಕಷ್ಟಗಳನ್ನು ಅರ್ಥೈಸಿಕೊಂಡು ವೈಯಕ್ತಿಕವಾಗಿ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ಗಳನ್ನು ವೈಯಕ್ತಿಕ ನೆರವಿನಿಂದ ಶಿವಮೊಗ್ಗ ನಗರದ ಪ್ರಿಂಟಿಂಗ್ ಪ್ರೆಸ್, ಬಸ್ಸು ಚಾಲಕ ಮತ್ತು ನಿರ್ವಾಹಕ , ಕಟ್ಟಡ, ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರಿಗೆ ವಾರಕ್ಕಾಗುವಷ್ಟು ಆಹಾರ ಕಿಟ್ ಗಳನ್ನು ಬಸವ ಕೇಂದ್ರದಲ್ಲಿ ಮೂರು ಬಾರಿ ವಿತರಿಸಲಾಗಿದೆ ಎಂದರು.
ನನ್ನ ನೂಡಲ್ ತಾಲ್ಲೂಕು ತಾಂತ್ರಿಕ ಕಾರಣದಿಂದ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಾಗಿರುವ ಹಿನ್ನೆಲೆಯಲ್ಲಿ , ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಜನಪ್ರತಿನಿಧಿಗಳಿಗೆ ತಲಾ ಒಂದು ಸಾವಿರ ಆಹಾರ ಕಿಟ್ ಗಳನ್ನು ನೀಡಲಾಗಿದೆ. ಆದರೆ ನನ್ನ ಸದಸ್ಯತ್ವ ದಾವಣಗೆರೆ ಮಹಾನಗರ ಪಾಲಿಕೆಗೆ ವರ್ಗಾವಣೆಯಾಗಿರುವುದರಿಂದ ನನಗೆ 1000 ಕಿಟ್ ದೂರೆಯದೇ ಇದ್ಧರೂ ಸಹ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ರವರ ಸಹಕಾರದಿಂದ 500 ಆಹಾರ ಸಾಮಗ್ರಿ ಕಿಟ್ ಗಳನ್ನು ತರಿಸಲಾಗಿದ್ದು ಈಗಾಗಲೇ ನಿನ್ನೆ ಭದ್ರಾವತಿ ವ್ಯಾಪ್ತಿಗೆ 100 ಕಿಟ್ ಗಳನ್ನು ವಿತರಿಸಲಾಗಿದ್ದು, 400 ಕಿಟ್ ಗಳನ್ನು ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳ ವ್ಯಾಪ್ತಿಯ ಅರ್ಹ ಬಡವರಿಗೆ ವಿತರಿಸಲು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಸಹಕಾರದಿಂದ ವಿತರಣೆ ಮಾಡಲಾಗುವುದು ಎಂದರು.
ಇಂದಿನ ಆಹಾರ ಕಿಟ್ ನಲ್ಲಿ 12 ಸಾಮಗ್ರಿಗಳಾದ ಅಡುಗೆ ಎಣ್ಣೆ, ಅಕ್ಕಿ, ಕಡ್ಲೇಕಾಳು, ರವೆ, ಹುರುಳಿಕಾಳು, ತೊಗರಿಬೇಳೆ, ಅವಲಕ್ಕಿ, ಸಕ್ಕರೆ, ಬಟ್ಟೆ ಸೋಪು, ಸ್ನಾನದ ಸೋಪು, ಸಾಂಬಾರ್ ಪುಡಿ, ಉಪ್ಪು ಒಳಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಸವಕೇಂದ್ರದ ಚರಮೂರ್ತಿಗಳಾದ ಪೂಜ್ಯ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ರವರು, ಕೇಬಲ್ ನಾಗರಾಜ್ ರವರು ಹಾಗೂ ಬಳ್ಳೇಕೆರೆ ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.