ಡಿವಿಜಿ ಸುದ್ದಿ, ಬೆಂಗಳೂರು: ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಸರ್ಕಾರವೇ ನೇರವಾಗಿ ರೈತರ ನೆರವಿಗೆ ಬರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ವಿರೋಧ ಪಕ್ಷದ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರೈತರಿಂದ ನೇರವಾಗಿ ಖರೀದಿ ಮಾಡುವ ಹಣ್ಣು, ತರಕಾರಿಗಳನ್ನು ಸರ್ಕಾರ ಬಡವರಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಿ 40 ದಿನಗಳಾಗಿದೆ. ಲಾಕ್ಡೌನ್ ಮತ್ತೆ ಮುಂದುವರಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಲಾಕ್ಡೌನ್ನಿಂದಾಗಿ ರೈತರು ಮಾತ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಾಗಣೆಗೂ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದ್ದು, ಕೃಷಿ ಉತ್ಪನ್ನಗಳ ಖರೀದಿಗೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17.38 ಲಕ್ಷ ಟನ್ ಇಳುವರಿಯ ತರಕಾರಿ ಬೆಳೆಗಳಿವೆ. 1.92 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32.55 ಲಕ್ಷ ಟನ್ಗಳಷ್ಟಿದೆ. ವಿವಿಧ ರೀತಿಯ ಹೂಗಳನ್ನು ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಸುಮಾರು 1 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಇದೆ. ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಬದುಕು ದುಸ್ತರವಾಗಿದೆ ಎಂದು ವಿವರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ರಮೇಶ್ ಕುಮಾರ್, ವಿ.ಎಸ್. ಉಗ್ರಪ್ಪ, ಜೆಡಿಎಸ್ನ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಕುಪೇಂದ್ರ ರೆಡ್ಡಿ, ಚೌಡರೆಡ್ಡಿ, ಸಿಪಿಐಎಂನ ನಾಗರಾಜು, ಬಸವರಾಜು, ಸಿಪಿಐನ ಸಾತಿ ಸುಂದರೇಶ್, ಲೋಕತಾಂತ್ರಿಕ ಜನತಾದಳದ ಡಾ. ಎಂ.ಪಿ.ನಾಡಗೌಡ, ರೈತ ಸಂಘಟನೆಗಳ ಕೋಡಿಹಳ್ಳಿ ಚಂದ್ರಶೇಖರ, ಕುರುಬೂರು ಶಾಂತಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



