ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಹರಡುವಿಕೆ ತಡೆಯಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ವಿಡಿಯೋ ಸಂವಾದ ನಡೆಸಲಿದ್ದಾರೆ. ಹೀಗಾಗಿ ಬೆಂಗಳೂರಲ್ಲದೆ, ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಿಸುವಂತೆ ಒತ್ತಡ ಹೆಚ್ಚಾಗಿದೆ.
ಸೋಂಕು ಪ್ರಕರಣಗಳು ಹೆಚ್ಚಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ರಾಯಚೂರು ಮತ್ತು ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಬೆಳಿಗ್ಗೆ 11 ಗಂಟೆಗೆ ಹಾಗೂ ಉಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂಜೆ 4 ಗಂಟೆಗೆ ಈ ಸಂವಾದ ನಡೆಯಲಿದೆ.
ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14ರಿಂದ 22ರವರೆಗೆ ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿದೆ. ಸೋಂಕು ಹೆಚ್ಚು ಪತ್ತೆಯಾಗುತ್ತಿರುವ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್ ಘೋಷಿಸಲು ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಸಂವಾದ ಮಹತ್ವ ಪಡೆದಿದೆ.



