ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಡೇಂಜರ್ ಜಿಲ್ಲೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಇದರಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಿವೆ.
ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಾಟ್‍ಸ್ಪಾಟ್ ಜಿಲ್ಲೆಗಳ ಮೇಲೆ ನಿಗಾಯಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ 17 ಜಿಲ್ಲೆಗಳಲ್ಲಿ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ವಿಚಾರದಲ್ಲಿ ಆಗಿರುವ ತಪ್ಪುಗಳನ್ನು ತಿದ್ದಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ 17 ಹಾಟ್‍ಸ್ಪಾಟ್ ಜಿಲ್ಲೆಗಳ ಮುಖ್ಯ ಆರೋಗ್ಯ ಅಧಿಕಾರಿಗಳ ಜೊತೆಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಗಳು ಸಭೆ ನಡೆಸಿದ್ದಾರೆ. ಭಾರತದ ಒಟ್ಟು ಸೋಂಕಿತರ ಸಂಖ್ಯೆ ಪೈಕಿ 17 ಜಿಲ್ಲೆಗಳಿಂದ ಶೇ.46ರಷ್ಟು ಸೋಂಕಿತರಿದ್ದು, ಈ ಜಿಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ದೇಶದ 17 ಡೇಂಜರ್ ಜಿಲ್ಲೆಗಳಲ್ಲಿ ರಾಜ್ಯದ ಕೊಪ್ಪಳ, ಮೈಸೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳು ಒಳಗೊಂಡಿವೆ. ಆಯಾ ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಕೊರೊನಾ ಬಗ್ಗೆ ವಿವರಣೆ ನೀಡಿದ್ದಾರೆ.
ಸಭೆಯಲ್ಲಿ ಮರಣ ದರವನ್ನು ಶೇ.1ಕ್ಕಿಂತ ಕಡಿಮೆ ಗೊಳಿಸಲು ಸೂಚನೆ ಮತ್ತು ಸೋಂಕು ನಿಯಂತ್ರಣ ಕ್ರಮಗಳು ಕುರಿತು ವಿಸ್ತೃತ ಲಿಖಿತ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.



