ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ 4,167 ಕೋಟಿ ಖರ್ಚು ಮಾಡಿದೆ. ಅದರಲ್ಲಿ ಎರಡು ಸಾವಿರ ಕೋಟಿ ಲೂಟಿ ಮಾಡಲಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಖರ್ಚು ಮಾಡಿದ ಪ್ರತಿ ಪೈಸೆ ಲೆಕ್ಕ ಕೊಡಬೇಕು. ಲೆಕ್ಕ ಕೇಳುವುದು ನಮ್ಮ ಹಕ್ಕು. ಇಲ್ಲದಿದ್ದರೆ ಜನರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಈ ಅವ್ಯವಹಾರ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಆಗ್ರಹಿಸಿದರು.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಮಾಡಿರುವ ಖರೀದಿ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಜೂನ್ ನಿಂದ ಪತ್ರ ಬರೆದಿದ್ದೇನೆ. 20 ಪತ್ರಗಳ ಪೈಕಿ ಒಂದಕ್ಕೆ ಮಾತ್ರ ಅಪೂರ್ಣ ಉತ್ತರ ನೀಡಿದ್ದಾರೆ. 24 ಗಂಟೆಗಳಲ್ಲಿ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದರು.ಇನ್ನೂ ಉತ್ತರ ನೀಡಿಲ್ಲ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದರು.
ವೈದ್ಯಕೀಯ ಉಪಕರಣಗಳ ಖರೀದಿಗೆ ₹324 ಕೋಟಿಯಷ್ಟೇ ಖರ್ಚು ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ₹33 ಕೋಟಿಯಷ್ಟೇ ಖರ್ಚು ಮಾಡಿದ್ದೇವೆ ಎಂದು ಇನ್ನೊಬ್ಬ ಸಚಿವರು ಹೇಳಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ, ಆರೊಗ್ಯ ಇಲಾಖೆಯೇ ₹700 ಕೋಟಿ ಖರ್ಚು ಮಾಡಿದೆ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳು ₹200 ಕೋಟಿ, ಜಿಲ್ಲಾಡಳಿತಗಳು ₹742 ಕೋಟಿ, ಕಾರ್ಮಿಕ ಇಲಾಖೆ ₹1 ಸಾವಿರ ಕೋಟಿ. ವೈದ್ಯಕೀಯ ಶಿಕ್ಷಣ ಇಲಾಖೆ ₹815 ಕೋಟಿ, ಸಮಾಜ ಕಲ್ಯಾಣ, ಶಿಕ್ಷಣ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ₹500 ಕೋಟಿ ಖರ್ಚು ಮಾಡಿವೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ಹಾಸಿಗೆ ದಿಂಬು ಖರೀದಿಗೆ ಕೇಂದ್ರ ಸರ್ಕಾರ ₹160 ಕೋಟಿ ನೀಡಿದೆ. ಒಟ್ಟು ₹4,167 ಕೋಟಿ ಖರ್ಚು ಮಾಡಿದೆ. ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ದರ ನೀಡಿ ಉಪಕರಣಗಳ ಖರೀದಿ ಮಾಡಿದೆ‘ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರ 9.65 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ. ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ 330 ರೂಪಾಯಿ ಇದೆ. ರಾಜ್ಯ ಸರ್ಕಾರ 2117 ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಮಹಾರಾಷ್ಟ್ರದ ಕಂಪನಿಯಿಂದ 3.5 ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಿದರು. ಕಳಪೆ ಗುಣಮಟ್ಟದ್ದು ಎಂದು ವೈದ್ಯರು ಗಲಾಟೆ ಮಾಡಿದಕ್ಕೆ ಬಳಿಕ 1 ಲಕ್ಷ ಕಿಟ್‌ಗಳನ್ನು ಮರಳಿಸಿದರು. ಚೀನಾದ ಕಂಪನಿ 3 ಲಕ್ಷ ಕಿಟ್‌ಗಳನ್ನು ಕೊಂಡುಕೊಂಡರು. ಒಂದು ಕಡೆ ಚೀನಾ ಉತ್ಪನ್ನಗಳನ್ನು ನಿಷೇಧಿಸಿ ಎನ್ನುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಚೀನಾದಿಂದಲೇ ಉತ್ಪನ್ನಗಳ ಖರೀದಿ ಮಾಡುತ್ತಿದ್ದಾರೆ. ಇದು ಬಿಜೆಪಿ ದ್ವಂದ್ವ ನಿಲುವು ಎಂದರು.



