ಡಿವಿಜಿ ಸುದ್ದಿ, ಬೆಂಗಳೂರು: ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ ಎಂಬ ಆರೋಪಕ್ಕೆ ರಾಜ್ಯ ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿದ್ದು, ಲಾಕ್ ಡೌನ್ ಮತ್ತು ಮಾನವ ಸಂಪನ್ಮೂಲ ಕೊರತೆಯಿಂದ ಉಪಕರಣಗಳನ್ನು ಹೆಚ್ಚಿನ ಬೆಲೆಗೆ ಕೊಂಡುಕೊಂಡಿದ್ದೇವೆ ಎಂದು ತಿಳಿಸಿದೆ.
ಕೋವಿಡ್ ನಿರ್ವಹಣೆಗಾಗಿ ಖರೀದಿರಿಸುವ ಉಪಕರಣಗಳ ಅಕ್ರಮಗಳ ಕುರಿತು ವಿಚಾರಣೆ ನಡೆಸಿದ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಆರೋಗ್ಯ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಈ ರೀತಿ ಹೇಳಿದೆ.
ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಈ ಹಿಂದೆ ಯಾವತ್ತೂ ಪಿಪಿಇ ಕಿಟ್‌ಗಳನ್ನು ಖರೀದಿಸಿರಲಿಲ್ಲ. ಅಂದಾಜು ಮೌಲ್ಯದ ಬಗ್ಗೆ ಸಂಸ್ಥೆಗೆ ಮಾಹಿತಿ ಇರಲಿಲ್ಲ. ಹೀಗಾಗಿ 330.40 ದರದಲ್ಲಿ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಲಾಕ್‌ಡೌನ್ ಕಾರಣದಿಂದ ಮಾನವ ಸಂಪನ್ಮೂಲ ಕೊರತೆ, ಕಚ್ಚಾ ವಸ್ತುಗಳ ಕೊರತೆಯಿಂದಾಗಿ ದರವನ್ನು 725ಕ್ಕೆ ಪರಿಷ್ಕರಿಸಬೇಕಾಯಿತು ಎಂದು ಆರೋಗ್ಯ ಇಲಾಖೆ ಹೇಳಿದೆ.
10 ಲಕ್ಷ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ಹೊರಡಿಸಲಾಗಿತ್ತು. ಯಾವ ಸಂಸ್ಥೆಗಳು ಸಮರ್ಪಕವಾಗಿ ಸರಬರಾಜು ಮಾಡಲಿಲ್ಲ. ಆದ್ದರಿಂದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಗೆ ಪರಿಷ್ಕೃತ ದರದಲ್ಲಿ ಖರೀದಿಸಲಾಯಿತು. ಆದರೆ, ಅವುಗಳು ಕೂಡ ಗುಣಮಟ್ಟದಿಂದ ಕೂಡಿಲ್ಲದ ಕಾರಣ 1.5 ಲಕ್ಷ ಕಿಟ್‌ಗಳ ಖರೀದಿ ಆದೇಶ ರದ್ದುಪಡಿಸಲಾಯಿತು. ಸ್ಥಳೀಯವಾಗಿಯೇ ಕಿಟ್ ಖರೀದಿಸಲಾಗಿದೆ ಎಂದು ಹೇಳಿದೆ.



