ಡಿವಿಜಿ ಸುದ್ದಿ, ಬಳ್ಳಾರಿ: ಆಗಸ್ಟ್ ಅಂತ್ಯಕ್ಕೆ ಕೊರೊನಾ ವೈರಸ್ ಪ್ರಕರಣಗಳು ಇನ್ನಷ್ಟು ಹೆಚ್ಚಲಿವೆ ಎಂಬ ತಜ್ಞ ವರದಿ ಹಿನ್ನೆಲೆ ರಾಜ್ಯದಲ್ಲಿ ಅಗತ್ಯ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ ಶೇ 97ರಷ್ಟು ಜನರಿಗೆ ರೋಗ ಲಕ್ಷಣಗಳೇ ಇಲ್ಲ. ಜ್ವರ ಬಾಧಿತರೇ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಸೊಂಕಿಗೀಡಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಥ ಲಕ್ಷಣಗಳು ಇರುವವರನ್ನು ಪ್ರತ್ಯೇಕ ಮಾಡಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
60 ವರ್ಷ ಮೇಲ್ಪಟ್ಟವರ ಪ್ರಕರಣಗಳನ್ನು ಮೊದಲಿಗೆ ಪತ್ತೆಹಚ್ಚಲು ಸೂಚಿಸಲಾಗಿದೆ. ಹವಾಮಾನ ಬದಲಾವಣೆಯಾಗಿ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರು ಫೀವರ್ ಕ್ಲಿನಿಕ್‌ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಿಮ್ಸ್ ನಿರ್ದೇಶಕ ಡಾ.ಬಿ.ದೇವಾನಂದ್ ಇದ್ದರು.



