ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜುಲೈ 5ರಿಂದ ಭಾನುವಾರ ಲಾಕ್‌ಡೌನ್, ರಾತ್ರಿ ವೇಳೆಯ ಕರ್ಫ್ಯೂ ಅವಧಿ ವಿಸ್ತರಣೆ ಸೇರಿದಂತೆ ಅನೇಕ ಕ್ರಮಗಳನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೆ ಬರುತ್ತಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿತ್ತು. ಇದೀಗ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಮತ್ತೆ ಲಾಕ್ ಡೌನ್ ವಿಸ್ತರಿಸುವುದಿಲ್ಲ. ಬದಲಾಗಿ ರಾತ್ರಿ ವೇಳೆಯ ಕರ್ಫ್ಯೂ ಅವಧಿ ವಿಸ್ತರಿಸಿ, ಭಾನುವಾರ ಲಾಕ್ ಡೌನ್ ಮಾಡಲು ತೀರ್ಮಾನಿಸಿದೆ.
ಸಭೆಯಲ್ಲಿ ತಗೆದುಕೊಂಡ ಪ್ರಮುಖ ತೀರ್ಮಾನಗಳು
- ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಜುಲೈ 5ರಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು.
- ಜುಲೈ 10ರಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ ಶನಿವಾರ, ಭಾನುವಾರ ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಕಚೇರಿಗಳಿಗೆ ರಜೆ ಘೋಷಣೆ
- ಪ್ರತಿ ದಿನ ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಅವಧಿಯನ್ನು ಬದಲಾವಣೆ .
- ಬೆಂಗಳೂರಿನಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ
- ಬೆಂಗಳೂರಿನಲ್ಲಿ ಅಂಬುಲೆನ್ಸ್ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಿ , ಕೋವಿಡ್‍ನಿಂದ ಮೃತ ದೇಹ ಸಾಗಿಸಲು ಪ್ರತ್ಯೇಕ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು
- ಕೋವಿಡ್-19 ರ ನಿಯಂತ್ರಣದಲ್ಲಿ ಕೆಲಸ ಮಾಡುವ ಎಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಪತ್ರಿಕೆಗಳ ಜಾಹೀರಾತು ಮುಖಾಂತರ ಸಾರ್ವಜನಿಕರಿಗೆ ಪ್ರಚಾರ
- ಮೆಡಿಕಲ್ ಕಾಲೇಜ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ಪೈಕಿ ಶೇ.50 ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲು
- ಬಿಬಿಎಂಪಿ 08 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಅವರ ಜೊತೆಗೆ ಕೆಲಸ ಮಾಡಲು ಕೆ.ಎ.ಎಸ್ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.
- ಆಸ್ಪತ್ರೆಗಳಲ್ಲಿ ಬೆಡ್‍ಗಳು ಪೂರ್ತಿಯಾದ ನಂತರ ರೋಗಿಗಳನ್ನು ಹೋಟೆಲ್‍ಗಳ ಕೊಠಡಿಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹೋಟೆಲ್‍ಗಳನ್ನು ಆಸ್ಪತ್ರೆ ಜತೆ ಸೇರಿಸಿಕೊಳ್ಳಲು ತೀರ್ಮಾನ
- ಕೋವಿಡ್-19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್ ತಂತ್ರಾಂಶ ಜಾರಿ
- ವೈದ್ಯರ ಕೊರತೆಯನ್ನು ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎ.ಎಸ್.ಐ ಡಾಕ್ಟರ್‍ಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕ್ಷಾರ್ತಿ ತಹಶೀಲ್ದಾರ್‍ಗಳನ್ನು ಕೋವಿಡ್ ಆಸ್ಪತ್ರೆಗಳು ಕೇರ್ ಸೆಂಟರ್‍ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ಹಾಕಲು ಸೂಚನೆ
- ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು ಹಾಗೂ ಇನ್ನಿತರೆ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಮೀಸಲು ಹಾಗೂ ರೈಲ್ವೆ ಇಲಾಖೆಯಿಂದ ಬೆಡ್‍ಗಳ ಕೋಚ್‍ನ್ನು ಪಡೆಯಲು ಕ್ರಮ
- ಮೃತ ದೇಹಗಳ ಅಂತ್ಯಕ್ರಿಯೆಗೆ ಹೆಚ್ಚಿನ ಜಾಗಗಳನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ