ಡಿವಿಜಿ ಸುದ್ದಿ, ಚಿತ್ರದುರ್ಗ: ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದರಿಂದ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ, 110 ವರ್ಷದ ಅಜ್ಜಿ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 110 ನೇ ವಯಸ್ಸಿನಲ್ಲಿಯೂ ಕೊರೊನಾ ಜಯಿಸಿದ್ದಾರೆ.
ನಗರದ ಪೊಲೀಸ್ ಕ್ವಾಟರ್ಸ್ ನಲ್ಲಿ ಮೊಮ್ಮಗನೊಂದಿಗೆ ಹಲವು ವರ್ಷಗಳಿಂದ ವಾಸವಾಗಿದ್ದ ಅಜ್ಜಿ, ತುಂಬಾ ಆರೋಗ್ಯವಾಗಿದ್ದರು. ವಯೋ ಸಹಜ ಕಾಯಿಲೆಗಳಾದ ಬಿಪಿ, ಶುಗರ್ ಸೇರಿದಂತೆ ಇನ್ನಿತರ ಯಾವುದೇ ಖಾಯಿಲೆಗಳು ಸಹ ಇರಲಿಲ್ಲ. ನಾಲ್ಕು ದಿನಗಳ ಹಿಂದೆ ಅವರ ಮನೆಯ ಇಬ್ಬರು ಮಹಿಳೆಯರು ಹಾಗೂ ಒಂದು ವರ್ಷದ ಮಗುವಿಗೆ ಕೊರೊನಾ ಸೋಂಕು ಪತ್ತೆ ಯಾಗಿತ್ತು. ಆಗ ಅಜ್ಜಿನ್ನು ತಪಾಸಣೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿತ್ತು.

110 ನೇ ವಯಸ್ಸಿನಲ್ಲಿಯೂ ಅಜ್ಜಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಹೆಮ್ಮಾರಿ ಕೊರೊನಾದಿಂದ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಮನೆಗೆ ತೆರಳುವಾಗ ಕುಟುಂಬಸ್ಥರನ್ನು ನೆನೆದ ಅಜ್ಜಿ, ಬಿಕ್ಕಿ ಬಿಕ್ಕಿ ಅತ್ತರು. ಆಗ ಯಾಕೆ ಅಳಿತಿದ್ದೀರಿ, ಹೆದರಬೇಡಿ ಎಂದು ನೆರೆದಿದ್ದವರು ಹೇಳಿದಾಗ, ನಮ್ಮ ಕುಟುಂಬಸ್ಥರಿಗೆ ಎಂತಹ ಸ್ಥಿತಿ ಬಂದಿದೆ. ಎಲ್ಲರೂ ಕ್ವಾರಂಟೈನ್ ಆಗಿದ್ದಾರೆ. ನಾನು ಈಗ ಡಿಸ್ಚಾರ್ಜ್ ಆಗಿದ್ದೇನೆ. ನಾನು ಎಲ್ಲಿಗೆ ಹೋಗಲಿ, ಏನು ಮಾಡಲಿ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಅಜ್ಜಿಯನ್ನು ಕರೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದ ಅಜ್ಜಿಯ ಮೊಮ್ಮಗ ಸಮಾಧಾನಪಡಿಸಿದರು. ಆಗ ಕ್ಷಣ ಕಾಲ ಸುಮ್ಮನಾದ ಅಜ್ಜಿ, ಓಮಿನಿಯಲ್ಲಿ ಕುಳಿತು ತಮ್ಮ ಮೊಮ್ಮಗ ಹಾಗೂ ಒಂದು ವರ್ಷದ ಮರಿ ಮೊಮ್ಮಗನನ್ನು ನೆನೆದು ಅಳತೊಡಗಿತ್ತು.
ಆಸ್ಪತ್ರೆಯ ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಅಜ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗಂಜಿ ಸೇರಿದಂತೆ ಇತರೆ ದ್ರಾವಣಪದಾರ್ಥಗಳು ಶುಚಿಯಾಗಿ, ರುಚಿಯಾಗಿರುತ್ತಿತ್ತು. ಹೀಗಾಗಿ ನಾನು ಬೇಗ ಗುಣಮುಖಳಾದೆ ಎಂದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ತುಂಬಾ ಸಂತಸ ವ್ಯಕ್ತಪಡಿಸಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ಹಾಗೂ ಡಾ.ಪ್ರಕಾಶ್, ಕೊರೊನಾ ವಾರಿಯರ್ಸ್ ಗಳಾದ ಮಲ್ಲಣ್ಣ, ರವಿ ಕುಮಾರ್ ಹಾಗೂ ಮುಕ್ತಾರ್ ಅಹಮ್ಮದ್ ಅಜ್ಜಿಯನ್ನು ಬೀಳ್ಕೊಟ್ಟರು.



