ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ನಗರ ಪಾಲಿಕೆ ಚುನಾವಣೆ ತುಂಬಾ ಮಹತ್ವದಾಗಿದ್ದು, ಎಲ್ಲರೂ ಪಕ್ಷದ ಅಭ್ಯರ್ಥಿ ಗೆಲ್ಲಿಸುವತ್ತಾ ಗಮನಹರಿಸಬೇಕು. ಪಕ್ಷದ ಅಭ್ಯರ್ಥಿ ಯಾರೇ ಆದರೂ ಒಗ್ಗಟ್ಟಿನಿಂದ ಪಾಲಿಕೆ ಆಡಳಿತ ಹಿಡಿಯುವತ್ತ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ನಗರದ ಚೌಕಿಪೇಟೆಯ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಪಾಲಿಕೆ ಚುನಾವಣೆ ಹಿನ್ನಲೆ ಕಾಂಗ್ರೆಸ್ ಪಕ್ಷದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅನಿರೀಕ್ಷಿತವಾಗಿ ಪಾಲಿಕೆ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ 45ಕ್ಕೆ 45 ಸ್ಥಾನಗಳನ್ನೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಇದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಶ್ರಮಿಸಬೇಕು.
6-8 ಸೀಟುಗಳು ಅವಿರೋಧವಾಗಿ ಆಯ್ಕೆಯಾಗಲಿದೆ. ಟಿಕೆಟ್ ಸಿಗಲಿಲ್ಲ ಎಂದು ಬೇಸರವಾಗದೆ ಪಕ್ಷದ ಗೆಲುವಿಗೆ ಶ್ರಮಿಸಿ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ನಗರ ಹೇಗೆ ಅಭಿವೃದ್ಧಿಯಾಗಿದೆ ಎಂಬುದು ಜನರಿಗೆ ಗೊತ್ತಾಗಿದೆ. ಪಾಲಿಕೆಯಲ್ಲಿ ನಮ್ಮ ಪಕ್ಷದ ಆಡಳಿತವಿದ್ದಾಗ ಸ್ಮಾರ್ಟ್ ಸಿಟಿ, ಜಲಸಿರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಾಗಿವೆ. ಈ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ಎದುರಿಸೋಣ ಎಂದರು
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಪಕ್ಷದ ಮುಖಂಡ ಸೈಯದ್ ಸೈಫುಲ್ಲ, ಜಿಲ್ಲಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ , ಕಾಂಗ್ರೆಸ್‌ನ ಎಸ್‌ಸಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಮಾಜಿ ಮೇಯರ್ ಚಮನ್ ಸಾಬ್, ಪಾಲಿಕೆ ಮಾಜಿ ಸದಸ್ಯ ಎಂ. ಹಾಲೇಶ್, ಅಯೂಬ್ ಪೈಲ್ವಾನ್ ಮಾತನಾಡಿದರು.
ಸಭೆಯಲ್ಲಿ ಕೆ.ಜಿ. ಶಿವಕುಮಾರ್, ಎಸ್. ಮಲ್ಲಿಕಾರ್ಜುನ್, ಮಾಲತೇಶ್ ರಾವ್ ಜಾಧವ್, ಹೆಚ್.ಬಿ. ಗೋಣೆಪ್ಪ, ಎಲ್.ಎಂ. ಹನುಮಂತಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.