ಡಿವಿಜಿ ಸುದ್ದಿ, ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನ 48 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆಯಾದ ಬುಲೆಟಿನ್‍ನಲ್ಲಿ, ಕೋಟೆನಾಡು ಚಿತ್ರದುರ್ಗದಲ್ಲಿ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಬೆಳಗ್ಗೆ 45 ಸೇರಿದಂತೆ ಇಂದು ಒಟ್ಟು 48 ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿದೆ. ಚಿತ್ರದುರ್ಗದಲ್ಲಿ ಪತ್ತೆಯಾದ ಮೂರು ವ್ಯಕ್ತಿಗಳು ಗುಜರಾತಿನ ಅಹಮದಾಬಾದ್ ನಿಂದ ಆಗಮಿಸಿದ ತಬ್ಲಿಘಿಗಳಾಗಿದ್ದಾರೆ. ಅವರನ್ನು ಚಿತ್ರದುರ್ಗ ನಗರದಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಬೆಳಗ್ಗೆಯ ಹೆಲ್ತ್ ಬುಲೆಟಿನ್ ನಲ್ಲಿ ಬೆಂಗಳೂರಿನಲ್ಲಿ 7, ಬೆಳಗಾವಿಯಲ್ಲಿ 11, ದಾವಣಗೆರೆಯಲ್ಲಿ 13, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 5 ತಿಂಗಳ ಕಂದಮ್ಮ ಹಾಗೂ 3 ವರ್ಷದ ಬಾಲಕಿ ಸೇರಿ 12, ಚಿತ್ರದುರ್ಗದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು 10 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.



