ಡಿವಿಜಿ ಸುದ್ದಿ, ಚಾಮರಾಜನಗರ: ಇಡೀ ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗದ ಚಮರಾಜನಗರದಲ್ಲಿಯೂ ಮುಂಬೈನಿಂದ ನೆಂಟರ ಮನೆಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಕೋವಿಡ್–19 ದೃಢಪಟ್ಟಿದೆ. ಈ ಮೂಲಕ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಚಾಮರಾಜನಗರಕ್ಕೂ ಮಹಾರಾಷ್ಟ್ರ ನಂಟು ಅಂಟಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದು, ಮಹಾರಾಷ್ಟ್ರದ ಮುಂಬೈ ನಿಂದ ಬಂದ ಯುವಕನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಯುವಕನೊಂದಿಗೆ ತಾಯಿ ಹಾಗೂ ಅಣ್ಣ ಕೂಡ ಬಂದಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದರು.
ಮುಂಬೈನಿಂದ ಮೂವರು ರೈಲಿನಲ್ಲಿ ಶುಕ್ರವಾರ ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ಯುವಕನ ಮಾವ ಕಾರಿನಲ್ಲಿ ಹನೂರು ತಾಲ್ಲೂಕಿನ ಮಾರ್ಟಳ್ಳಿ ಪಾಲಿಮೇಡುವಿನಲ್ಲಿರುವ ಮನೆಗೆ ಕರೆದುಕೊಂಡು ಬಂದಿದ್ದರು. ಮರು ದಿನ ಬೆಳಗ್ಗೆ ಕೊಳ್ಳೇಗಾಲದಲ್ಲಿ ತಪಾಸಣೆ ಮಾಡಿದಾಗ ಪಾಸಿಟಿವ್ ಪತ್ತೆಯಾಗಿದೆ.
ಚಾಮರಾಜನಗರದಲ್ಲಿ ಸ್ಥಳೀಯ ನಿವಾಸಿಗಳಿಗೆ ಯಾರಿಗೂ ಸೋಂಕು ಬಂದಿಲ್ಲ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆ ಗ್ರೀನ್ ಝೋನ್ ನಲ್ಲಿಯೇ ಉಳಿಯಲಿದೆ ಎಂದು ತಿಳಿಸಿದರು.



