ನವದೆಹಲಿ: ಜೂನ್ 19 ರಂದು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಚ್ಚರಿಯಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸಾಮಾನ್ಯ ಕಾರ್ಯಕರ್ತರಿಬ್ಬರನ್ನು ಆಯ್ಕೆ ಮಾಡಿ, ಟಿಕೆಟ್ ಗಾಗಿ ಭಾರೀ ಲಾಭಿ ಮಾಡಿದ್ದವರಿಗೆ ಶಾಕ್ ನೀಡಿದೆ.
ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ ಅವರನ್ನು ರಾಜ್ಯಸಭೆ ಅಭ್ಯರ್ಥಿಗಳಾಗಿದ್ದಾರೆ.

ಈ ಇಬ್ಬರ ಆಯ್ಕೆ ಅಚ್ಚರಿಯಾಗಿದ್ದು, ರಾಜ್ಯದ ಕೋರ್ ಕಮಿಟಿ ಕಳುಹಿಸಿದ್ದ ಪ್ರಸ್ತಾವನೆಯನ್ನು ಹೈಕಮಾಂಡ್ ತಿರಸ್ಕರಿಸಿ ಅಚ್ಚರಿಯಾಗಿ ಅಭ್ಯರ್ಥಿ ಆಯ್ಕೆ ಮಾಡಿದೆ.
ಕೆಎಲ್‌ಇ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆ, ಮಾಜಿ ಸಂಸದ ಹುಕ್ಕೇರಿಯ ರಮೇಶ ಕತ್ತಿ, ಉದ್ಯಮಿ ಕೆ.ಪ್ರಕಾಶ ಶೆಟ್ಟಿ ಅವರ ಹೆಸರುಗಳನ್ನು ರಾಜ್ಯ ಕೋರ್ ಕಮಿಟಿಯ ಸಭೆಯಲ್ಲಿ ಅಂತಿಮಗೊಳಿಸಲಾಗಿತ್ತು. ಈ ಪಟ್ಟಿಯನ್ನು ಹೈಕಮಾಂಡ್‌ಗೆ ಕೂಡ ಕಳುಹಿಸಿಕೊಡಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಸಾಮಾನ್ಯ ಕಾರ್ಯಕರ್ತರಿಗೆ ಮಣಿ ಹಾಕಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿರುವ ಈರಣ್ಣ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ರಾಯಚೂರು ಮೂಲದ ಅಶೋಕ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದವರು.



