ಡಿವಿಜಿ ಸುದ್ದಿ, ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯ ಬೀರೂರು-ಸಮ್ಮಸಗಿ ರಸ್ತೆಯ ರಾಜ್ಯ ಹೆದ್ದಾರಿ-76ರ ಕಾಂಕ್ರೀಟ್ ರಸ್ತೆ ಹಾಗೂ ಬಾತಿಕೆರೆಯ ಏರಿಯ ಅಗಲೀಕರಣದ 20 ಕೋಟಿ ವೆಚ್ಚದ ಕಾಮಗಾರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿದರು.
ದೊಡ್ಡಬಾತಿ ಹಾಲಿನ ಡೈರಿ ಬಳಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಲ್ಲಿ ಕಲ್ಲಿನ ಅಭಾವವಿದ್ದು, ಹರಪನಹಳ್ಳಿಯ ಜಲ್ಲಿ ಕ್ವಾರಿಗಳ ನೆರವು ಪಡೆದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಕೇವಲ 2 ಜಲ್ಲಿಕ್ವಾರಿಗಳಿವೆ. ಅಲ್ಲದೇ, ಬಳ್ಳಾರಿ ತಾಲ್ಲೂಕಿನಲ್ಲಿ ಕಲ್ಲಿನ ಕ್ವಾರಿಗಳ ಕಾರ್ಯವನ್ನೂ ನಿಲ್ಲಿಸಲಾಗಿದೆ. ಇದರಿಂದಾಗಿ ಕಾಮಗಾರಿಗಳಿಗೆ ಜಲ್ಲಿಕಲ್ಲಿನ ಅಭಾವ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳಿಗೆ ಅಗತ್ಯವಾದ ಜಲ್ಲಿಕಲ್ಲುಗಳನ್ನು ಪಡೆಯಲಾಗುವುದು ಎಂದರು.
ಬೀರೂರು-ಸಮ್ಮಸಗಿ ರಸ್ತೆ ಕಾಂಕ್ರೀಟ್ ರಸ್ತೆ ಹಾಗೂ ಬಾತಿಕೆರೆಯ ಏರಿಯ 116.00 ಕಿ.ಮೀ ರಿಂದ 117.40 ಕಿ.ಮೀ ರವರೆಗೆ ಅಗಲೀಕರಣ ಕಾಮಗಾರಿ ಇದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಬಾತಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.



