ಡಿವಿಜಿ ಸುದ್ದಿ, ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೋಮುವಾದ ಸೃಷ್ಠಿಸುವ ಹೇಳಿಕೆ ನೀಡಿದ್ದರೆಂದು ಆರೋಪಿಸಿ, ರೇಣುಕಾಚಾರ್ಯ ಫೋಟೋಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಲಿ ಏಟು ನೀಡಿ ಪ್ರತಿಭಟನೆ ನಡೆಸಿದರು.
ಹೊನ್ನಾಳಿಯಲ್ಲಿ ಪೌರತ್ವ ಕಾಯ್ದೆ(ಸಿಎಎ) ಬೆಂಬಲದ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಮುಂದೆ ಜಮಾಯಿಸಿದ ಕಾರ್ಯಕರ್ತರು ರೇಣುಕಾಚಾರ್ಯ ಫೋಟೋಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುವ ಮುಸ್ಲಿಂರು , ದೇಶದ್ರೋಹಿಗಳು ಅಂತಾ ಹೇಳಿಕೆ ನೀಡಿದ್ದರು.

ಮುಸ್ಲಿಂ ಸಮುದಾಯವನ್ನ ಕೆರಳಿಸುವ ಹೇಳಿಕೆಗಳನ್ನು ಬಿಜೆಪಿಯ ಸಿಟಿ ರವಿ, ರೇಣುಕಾಚಾರ್ಯ ಹಾಗೂ ಕಲ್ಕಡ್ಕ ಪ್ರಭಾಕರ್ ಭಟ್ ಸೇರಿ ಹಲವರು ನೀಡುತ್ತಿದ್ದಾರೆ. ಸಿಎಎ ವಿಷಯದಲ್ಲಿ ಕಾನೂನು ಬದ್ಧ ಸುವ್ಯವಸ್ಥೆಗೆ ಧಕ್ಕೆ ತರೋ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಕೋಮುಗಲಭೆ, ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಇವರ ವಿರುದ್ಧ ದೂರು ನೀಡಿದ್ರೂ ಇವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಇವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ದೂರು ನೀಡಿದರು.



