ಡಿವಿಜಿ ಸುದ್ದಿ, ಬೆಂಗಳೂರು: ದೀಪಾವಳಿ ಹಬ್ಬ ಪ್ರಯುಕ್ತ ಅಧಿಕೃತ ಪರವಾನಗಿ ಪಡೆದ ಮಾರಾಟಗಾರಿಗೆ ನ. 1ರಿಂದ 17ರವರೆಗೆ ಪಟಾಕಿ ಮಾರಾಟ ಮಾಡಲು ಷರತ್ತಿನೊಂದಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.
ಕೊರೊನಾ ವೈರಸ್ ಹಿನ್ನೆಲೆ ಹಬ್ಬದ ಆಚರಣೆಗೆ ಮಾರ್ಗಸೂಚಿ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಮಾರಾಟ ಮಳಿಗೆಗಳಲ್ಲಿ ಎರಡೂ ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳ ಮಧ್ಯೆ 6 ಮೀಟರ್ ಅಂತರ ಇರಬೇಕು.
ಮಳಿಗೆಗಳ ಸುತ್ತ ನಿತ್ಯ ಸ್ಯಾನಿಟೈಸ್ ಮಾಡಬೇಕು. ಪಟಾಕಿ ಖರೀದಿಸಲು ಬರುವವರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ಕನಿಷ್ಠ 6 ಅಡಿ ಅಂತರ ಗುರುತಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯ ಎಂದೂ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಜನದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಸೋಂಕು ಹರಡದಂತೆ ತಡೆಯಲು ಕೇಂದ್ರ–ರಾಜ್ಯ ಸರ್ಕಾರ ನಿಯಮ ಪಾಲನೆ ಕಡ್ಡಾಯ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.



