ಡಿವಿಜಿ ಸುದ್ದಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೇ ಲಾಕ್‍ಡೌನ್ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟ ಕೂಡಲೇ ಅವರನ್ನು ಆರರಿಂದ ಏಳು ಗಂಟೆಯೊಳಗೆ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿ 100 ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಮೆಡಿಕಲ್ ಕಾಲೇಜುಗಳಲ್ಲಿ ಸುಮಾರು 10 ಸಾವಿರ ಬೆಡ್ ಗಳಿರುವ ಬಗ್ಗೆ ಮಾಹಿತಿ ಇದೆ. ಆಸ್ಪತ್ರೆಗಳ ಜೊತೆ ಮಾತನಾಡಿ 5 ಸಾವಿರ ಬೆಡ್ ಪಡೆಯಲಾಗುತ್ತದೆ. ಕೆಲ ವೈದ್ಯಕೀಯ ಕಾಲೇಜುಗಳು ಈಗಾಗಲೇ ಬೆಡ್ ಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರಲ್ಲಿ ಶೇ.61ರಷ್ಟು ಮಂದಿ ಗುಣಮುಖರಾಗಿದ್ದು, ರಾಜ್ಯದಲ್ಲಿ ಕೇವಲ 3,700 ಸಕ್ರಿಯ ಪ್ರಕರಣಗಳಿವೆ. ನಾಳೆಯ ಮಧ್ಯಾಹ್ನ ಬೆಂಗಳೂರಿನ ಎಲ್ಲ ಲೋಕಸಭಾ ಕ್ಷೇತ್ರಗಳ ಸಂಸದರು ಮತ್ತು ವಿಧಾನಸಭಾ ಕ್ಷೇತ್ರಗಳ ಶಾಸಕರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಬೆಂಗಳೂರಿನ 6 ವಾರ್ಡ್ ಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಅಲ್ಲಿ ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದರು.



