ಡಿವಿಜಿ ಸುದ್ದಿ, ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯ ರಾವ್ ಎಂಬಾತನನ್ನು ಬೆಂಗಳೂರು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ವಶಕ್ಕೆ ಪಡೆದಿದ್ದು, ಮಹಾ ನಿರ್ದೇಶಕರ ಕಚೇರಿಯಲ್ಲಿ ಇರಿಸಲಾಗಿದೆ. ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಶರಣಾದ ವ್ಯಕ್ತಿಯನ್ನು ಆದಿತ್ಯ ರಾವ್ ಎಂದು ಗುರುತಿಸಲಾಗಿದೆ. ನಾನೇ ಬಾಂಬ್ ಇಟ್ಟಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಆತನ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಈ ಪ್ರಕರಣವನ್ನು ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಬೆಂಗಳೂರು ಬರುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಆತನನ್ನು ಅವರಿಗೆ ಹಸ್ತಾಂತರಿಸಲಾಗುವುದು. ಆತ ಈ ಹಿಂದೆ ಭಾಗಿಯಾದ ಘಟನೆಗಳ ಬಗ್ಗೆ ವಿಚಾರಣೆ ಮಾಡಬೇಕಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕಾಣದ ಸಿಸಿ ಟಿವಿ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆದಿತ್ಯ ರಾವ್, ಮಾರುವೇಷದಲ್ಲಿ ಮಂಗಳೂರಿನಿಂದ ಲಾರಿಯಲ್ಲಿ ಬೆಂಗಳೂರಿಗೆ ತೆರಳಿದ್ದ.ನಗರದ ಚಿಲಿಂಬಿಯಲ್ಲಿ ವಾಸಿಸುತ್ತಿದ್ದ ಆದಿತ್ಯ ರಾವ್, ಕೆಲ ದಿನಗಳ ಹಿಂದೆ ಹೋಟೆಲ್ ನಲ್ಲಿ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಹೋಟೆಲ್‌ನಲ್ಲಿಯೇ ಬಾಂಬ್ ತಯಾರಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ ಈ ಎಲ್ಲ ಮಾಹಿತಿ ಬಹಿರಂಗವಾಗಿವೆ. ಆನ್‌ಲೈನ್ ಮೂಲಕ ಪೌಡರ್ ತರಿಸಿದ್ದು, ಅದರಿಂದ ಬಾಂಬ್ ತಯಾರಿಸಿದ್ದ. ಹೋಟೆಲ್‌ನ ರೂಮ್‌ನಲ್ಲಿ ಬಾಂಬ್ ತಯಾರಿಕೆಗೆ ಬಳಸಿದ್ದ ಪೌಡರ್ ಪತ್ತೆಯಾಗಿದೆ. ವಿಚಿತ್ರವಾಗಿ ವರ್ತಿಸುತ್ತಿದ್ದ ಆದಿತ್ಯ ರಾವ್, ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ತನ್ನಷ್ಟಕ್ಕೆ ಇರುತ್ತಿದ್ದ ಎಂದು ಹೋಟೆಲ್ ಸಹೋದ್ಯೋಗಿಗಳು ತಿಳಿಸಿದ್ದಾರೆ.
ನಿನ್ನೆಯಷ್ಟೇ ಸಿಸಿಟಿವಿ ದೃಶ್ಯಾವಳಿ ಹಾಗೂ ಶಂಕಿತನ ಫೋಟೊ ಬಿಡುಗಡೆ ಮಾಡಿದ್ದ ಪೊಲೀಸರು, ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದರು. ಎಲ್ಲ ಆಯಾಮಗಳಿಂದ ತನಿಖೆ ನಡೆಸಿದಾಗ, ಈ ಹಿಂದೆ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಆದಿತ್ಯರಾವ್ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿತ್ತು.
.



