ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಕರಗಿದ ಸಿಎಂ ಯಡಿಯೂರಪ್ಪ ಅವರು ತಾವೇ ನರ್ಸ್‍ಗೆ ಕರೆಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ನರ್ಸ್ ಸುನಂದಾ ಅವರಿಗೆ ಕರೆ ಮಾಡಿ, ನಿಮ್ಮ ಸೇವೆಗೆ ನಾವು ಗೌರವ ಕೊಡುತ್ತೇವೆ. ನಿನ್ನ ಜೊತೆ ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದಿದ್ದಾರೆ.
ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಕೊರೊನಾ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಸುನಂದಾ ಅವರು, ಕಳೆದ 15 ದಿನ ಮನೆಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಬಂದಿದ್ದ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆ ಮುಂದೆಯೇ ಅಮ್ಮ ಬೇಕು ಎಂದು ಕಣ್ಣೀರು ಹಾಕಿದ್ದಳು. ಮಗಳು ಮತ್ತು ಅಮ್ಮನ ಕಣ್ಣೀರಿನ ದೃಶ್ಯಕ್ಕೆ ರಾಜ್ಯದ ಜನ ಮಿಡಿದಿದ್ದರು.
ಬೆಳಗಾವಿಯಲ್ಲಿ ಸದ್ಯ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅವರಿಗೆ ಚಿಕಿತ್ಸೆ ನೀಡಲು ನರ್ಸ್ ಮತ್ತು ವೈದ್ಯರು ಮನೆಗೆ ಹೋಗದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸುನಂದಾ ಅವರು ಕೂಡ ಮನೆಗೆ ಹೋಗಿರಲಿಲ್ಲ. ಆದರೆ ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿರುತ್ತಾಳೆ. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಮಂಗಳವಾರ ತಂದೆ ಸಂತೋಷ್ ಅವರು ಪತ್ನಿ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರಿದ್ದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದ್ದರು.
ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮನಿಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು.