ಡಿವಿಜಿ ಸುದ್ದಿ, ಧಾರವಾಡ: ಮಹಾರಾಷ್ಟರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಬಂದ ಮೇಲೆ ಬೆಳಗಾವಿಯಲ್ಲಿ ವಿನಃಕಾರಣ ಗಡಿ ವಿಚಾರವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಅನೋನ್ಯವಾಗಿದ್ದಾರೆ. ಬೆಳಗಾವಿ ಕರ್ನಾಟಕ ಭಾಗ. ಉದ್ಧವ್ ಠಾಕ್ರೆ ಗಡಿ ವಿಚಾರವಾಗಿ ಕಿಚ್ಚು ಹಚ್ಚುವ ಕೆಲಸ ಬಿಟ್ಟು ಆಡಳಿತದ ಕಡೆ ಗಮನ ಕೊಡಲಿ ಎಂದರು.
ಶಿವಸೇನೆಗೆ ಸರ್ಕಾರ ಮಾಡಲು ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಹೀಗಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷದವರು ಬೆಳಗಾಗವಿ ವಿಚಾರದಲ್ಲಿ ತಮ್ಮ ನಿಲುವು ಏನೆಂಬುವುದನ್ನು ಸ್ಪಷ್ಟಪಡಿಸಬೇಕು. ಭೀಮಾಶಂಕರ ಪಾಟೀಲ್ ಕನ್ನಡಿಗರ ರಕ್ಷಣೆ ಬಗ್ಗೆ ಹೇಳಿಕೆ ಕೊಟ್ಟರೆ, ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಮಹದಾಯಿ ವಿಷಯವನ್ನು ಸೌಹಾರ್ದತಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಸೌಹಾರ್ದತೆ ಸೃಷ್ಟಿಸಿಕೊಂಡು ಬಗೆ ಹರಿಸಬೇಕಿದೆ. ಕಾಂಗ್ರೆಸ್ ಇಷ್ಟು ದಿನ ಈ ಕಾರ್ಯ ಮಾಡಿಲ್ಲ. ಗೋವಾ ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.



