ಡಿವಿಜಿಸುದ್ದಿ, ದಾವಣಗೆರೆ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ವಿಲೀನ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ದೇಶವ್ಯಾಪಿ ಕರೆ ನೀಡಿದ್ದ ದಿನದ ಮುಷ್ಕರದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಬ್ಯಾಂಕ್ ನೌಕರರು ಭಾಗಿಯಾಗಿದ್ದರು.
ನಗರದ ಮಂಡಿಪೇಟೆಯ ಹರ್ಡೇಕರ್ ಮಂಜಪ್ಪ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯ ಮುಂಭಾಗ ಪ್ರತಿಭಟನೆ ನಡೆಸಿದ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನದ ವಿರೋಧಿಸಿ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ ಉದ್ಯೋಗಿಗಳು, ನಿವೃತ್ತ ಉದ್ಯೋಗಿಗಳು ಹಾಗೂ ಪಿಗ್ಮಿ ಸಂಗ್ರಹಕಾರರು ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ನೀಡಿದರು.
ಜಾಗತಿಕ ಮಟ್ಟದಲ್ಲಿ ದೊಡ್ಡಗಾತ್ರದ ಬ್ಯಾಂಕುಗಳನ್ನು ಹೊಂದಬೇಕು ಎನ್ನುವ ಏಕೈಕ ಉದ್ದೇಶದಿಂದ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯ ಬ್ಯಾಂಕುಗಳನ್ನು ಅನಗತ್ಯವಾಗಿ ವಿಲೀನಗೊಳಿಸಲಾಗುತ್ತಿದೆ. ಆದರೆ ಇದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಹಿಂದೆ ಹಲವಾರು ದಶಕಗಳಿಂದ ನಡೆದ ಯಾವುದೇ ಬ್ಯಾಂಕುಗಳ ವಿಲೀನ ನಿರೀಕ್ಷಿತ ಯಶಸ್ಸನ್ನು ನೀಡಿಲ್ಲ. ದೊಡ್ಡ ಬ್ಯಾಂಕು-ದೊಡ್ಡ ಅಪಾಯಕಾರಿ ಎನ್ನುವುದು ನೌಕರ ಸಂಘಟನೆಗಳ ನಿಲುವು.
ಮುಷ್ಕರದ ನೇತೃತ್ವವನ್ನು ಬಿ. ಆನಂದಮೂರ್ತಿ, ಕೆ.ರಾಘವೇಂದ್ರ ನಾಯರಿ, ಆರ್. ಆಂಜನೇಯ, ಎಂ.ಟಿ. ರಂಗಪ್ಪ, ಹೆಚ್.ಎಸ್. ತಿಪ್ಪೇಸ್ವಾಮಿ, ರವಿಶಂಕರ್ ಕೆ., ಜಿ. ರಂಗಸ್ವಾಮಿ, ಹೆಚ್. ಸುಗೀರಪ್ಪ, ಅಜಿತ್‌ಕುಮಾರ್ ನ್ಯಾಮತಿ, ವಿಶ್ವನಾಥ ಬಿಲ್ಲವ, ಎನ್. ವೀರಪ್ಪ, ಪರಶುರಾಮ ಸಿ., ಹವಳಪ್ಪ, ಜೆ.ಟಿ. ಶಕ್ತಿಪ್ರಸಾದ್, ಎಂ.ಎಂ. ಸಿದ್ಧಲಿಂಗಯ್ಯ, ಸೇರಿದಂತೆ ಅನೇಕರು ಭಾಗಿಯಾಗಿದ್ದರು.



