ಡಿವಿಜಿ ಸುದ್ದಿ, ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
ಕೆರೂರು ಪಟ್ಟಣದ ಲಕ್ಷ್ಮಣ ಹಾದಿಮನಿ (32), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಾನಂದಪ್ಪ ಕರಿ (17) ಹಾಗೂ ಹುಬ್ಬಳ್ಳಿಯ ಪೂಜಾ ಹಳಪೇಟೆ (22) ಮೃತ ದುರ್ದೈಗಳಾಗಿದ್ದಾರೆ.

ಗದಗ ಜಿಲ್ಲೆ ನರಗುಂದದ ನಿವಾಸಿ ಮಂಜುಳಾ ಜವಳಿ (16) ಹಾಗೂ ಪ್ರಜ್ವಲ್ ಕೋಟಿ (16) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಬ್ಬರನ್ನು ಕೆರೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ವೇಗವಾಗಿ ಹೊರಟಿದ್ದ ಲಾರಿ, ಕೆರೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಫುಟ್ ಪಾತ್‍ಗೆ ನುಗ್ಗಿದೆ. ಲಾರಿಯ ರಭಸಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಕಂಪೌಂಡ್ ಒಡೆದು ಹೋಗಿದ್ದು, ರಸ್ತೆ ಬದಿಯಲ್ಲಿದ್ದ ಪಾನ್‍ಶಾಪ್ ಸಂಪೂರ್ಣವಾಗಿ ಹಾನಿಯಾಗಿದೆ.
ಪಾನ್‍ಶಾಪ್ ಮುಂದೆ ನಿಂತಿದ್ದವರ ಮೇಲೆ ಲಾರಿ ಹರಿದು ಮೂರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಸಂಬಂಧ ಕೆರೂರು ಪೊಲೀಸರು ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.



