ಅಂಕಣ
ಅಂಕಣ : ಧರ್ಮಸಮನ್ವಯದ ಪ್ರತೀಕವಾದ Virtual Wedding..!
– ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
ಕೊರೊನಾ ವೈರಾಣು ಈಗ ಎಲ್ಲರನ್ನೂ ಅಸ್ಪೃಶ್ಯರನ್ನಾಗಿ ಮಾಡಿದೆ. ”ಮಡಿ ಮಡಿ ಮಡಿ ಯೆಂದು ಅಡಿಗಡಿಗೆ ಹಾರುವೆ, ಮಡಿ ಮಾಡುವ ಬಗೆ ಬೇರುಂಟು!” ಎಂದು ಪುರಂದರದಾಸರು ಕರ್ಮಠರನ್ನು ಕುರಿತು ವ್ಯಂಗ್ಯವಾಡಿದ್ದಾರೆ. ಆದರೆ ಕೊರೊನಾ ದೆಸೆಯಿಂದ ಮುಟ್ಟಲು ಮುಟ್ಟಿಸಿಕೊಳ್ಳಲು ಬೆದರಿ ‘ಅಡಿಗಡಿಗೆ ಹಾರುವ” ಪರಿಸ್ಥಿತಿ ಈಗ ಸಮಾಜದಲ್ಲಿ ಉಂಟಾಗಿರುವುದಂತೂ ನಿಜ ! ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಯ ಕಾರಣಕ್ಕಾಗಿ ‘ಅಸ್ಪೃಶ್ಯತೆ’ ಯನ್ನು ಪಾಲಿಸುವುದೀಗ ಅನಿವಾರ್ಯವಾಗಿದೆ. ಮುಟ್ಟುವುದು ಮುಟ್ಟಿಸಿಕೊಳ್ಳುವುದಿರಲಿ ಎದುರಿಗಿದ್ದವರ ಉಸಿರು ತಾಗದಂತೆ, ಮಾಸ್ಕ್ ಧರಿಸಿ ಮೂಗು ಬಾಯಿ ಮುಚ್ಚಿಕೊಳ್ಳುವುದು ಇಂದಿನ ಶಿಷ್ಟಾಚಾರವೇ ಆಗಿದೆ. ಪಂಚೇಂದ್ರಿಯಗಳಲ್ಲಿ ಮೂರು ಇಂದ್ರಿಯಗಳಿಗೆ ಮೂಗುದಾರಬಿದ್ದಿದೆ! ಕೊರೊನಾದ ದುಷ್ಪರಿಣಾಮದಿಂದ ಕರುಳುಬಳ್ಳಿಯ ಆತ್ಮೀಯ ಸಂಬಂಧಗಳೂ ಮೂರಾಬಟ್ಟೆಯಾಗುವ ಅತಿ ಕೆಟ್ಟ ಸಂಕ್ರಮಣ ಕಾಲದಲ್ಲಿ ಇಡೀ ಜಗತ್ತು ಈಗ ತಲ್ಲಣಸುತ್ತಿದೆ. ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವಂತಿಲ್ಲ. ಮದುವೆ ಮಂಗಳ ಕಾರ್ಯಗಳಲ್ಲಿ ಬಂಧು ಬಾಂಧವರು ಭಾಗವಹಿಸಿ ಸಂತಸ ಪಡುವಂತಿಲ್ಲ. ಅಷ್ಟೇ ಏಕೆ ವಧುವರರಿಗೆ ಹೆತ್ತ ತಂದೆತಾಯಂದಿರೇ ಖುದ್ದು ಹಾಜರಾಗಿ ಹೆಸರು ಹಾಗುತ್ತಿಲ್ಲ. ಅಂತಹ ಒಂದು ಮನಮಿಡಿಯುವ ಪ್ರಸಂಗ ಕಳೆದ ವಾರ ನಮ್ಮ ಸ್ವಾನುಭವಕ್ಕೆ ಬಂದಿತು.
ಮುಂಬೈಯಿಂದ ದುಬೈಗೆ ವಲಸೆ ಹೋದ ಉದಯ್, ಭಾರತೀಯ ನೌಕಾಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾವದರು. ನೌಕೆಯ ಮುಖ್ಯ ಎಂಜಿನಿಯರಾಗಿ ಕಾರ್ಯ ನಿರ್ವಹಿಸಿದ ಅವರು ನಿವೃತ್ತಿಯ ನಂತರ ದುಬೈನಲ್ಲಿ ಸ್ವಂತ ಕಂಪನಿಯೊಂದನ್ನು ಸ್ಥಾಪಿಸಿಕೊಂಡು ವಾಣಿಜ್ಯೋದ್ಯಮದ ಹಡಗುಗಳ ಸುರಕ್ಷತೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ.ಅವರ ಪತ್ನಿ ಅನಿತಾ ನಮ್ಮ ಮಠದ ಶಿಷ್ಯೆ. ದುಬೈ ಮಾರ್ಗವಾಗಿ ಪರದೇಶಗಳಿಗೆ ಪ್ರಯಾಣಿಸಿದ ಸಂದರ್ಭಗಳಲ್ಲಿ ಕೆಲವೊಮ್ಮೆ ಅವರ ಮನೆಯಲ್ಲಿಯೇ ಕುಳಿತು ನಮ್ಮ ಅಂಕಣವನ್ನು ಬರೆದ ನೆನಪು.ಅವರ ಮಕ್ಕಳಾದ ಋದ್ವಿ ಮತ್ತು ರೋಹನ್ ನಮ್ಮ ಪುಟ್ಟ ಗಣಕಯಂತ್ರಕ್ಕೆ ಬೇಕಾದ ಎಲ್ಲ ತಾಂತ್ರಿಕ ನೆರವನ್ನು ನೀಡುತ್ತಿದ್ದರು. ಆ ಋದ್ವಿಯ ಮದುವೆಯೇ ನಮ್ಮ ಈ ಅಂಕಣದ ಬರಹದ ವಿಷಯವಾಗುತ್ತದೆ ಎಂದು ಎಣಿಸಿರಲಿಲ್ಲ. ಮಗಳಿಗೆ ಅನುರೂಪನಾದ ವರನ ಅನ್ವೇಷಣೆಗಾಗಿ ತಾಯಿ ಅನಿತಾ ಅನೇಕ ಬಾರಿ ಬೆಂಗಳೂರಿಗೆ ಬಂದು ನಿರಾಸೆಗೊಂಡು ಹಿಂದಿರುಗುತ್ತಿದ್ದರು.ಎಲ್ಲಾ ತಾಯಂದಿರಂತೆ ಪರಿತಪಿಸುತ್ತಿದ್ದ ಅವರಿಗೆ ಕೊನೆಗೆ ಅಳಿಯನಾಗಿ ದೊರೆತ ವರ ‘ಕಾಶ್ಮೀರೇ ವಸತೇ ಕನ್ಯಾ ಲಂಕಾಯಾಂ ವಸತೇ ವರ’ ಎನ್ನುವಂತೆ ದೂರದ ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರದ ನಿವಾಸಿಯಾದ ಭಾರತೀಯ ಸಾಫ್ಟ್ ವೇರ್ ಎಂಜಿನಿಯರ್ ಆದಿತ್ಯ. ಅವರ ಮದುವೆಯ ದಿನಾಂಕ ನಿಗದಿ ಗುಂಡು ಕಳೆದ ಏಪ್ರಿಲ್ ತಿಂಗಳು ದುಬೈನಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು ಮುದ್ರಿಕೆಯನ್ನು ಮೊದಲೇ ದೇವರ ಮನೆಯಲ್ಲಿ ಇಟ್ಟಿದ್ದರು ದೇವರ ಇಚ್ಛೆಯೇ ಬೇರೆಯಾಗಿತ್ತು! ಕೋವಿಡ್ ಕಾರಣಕ್ಕಾಗಿ ಮದುವೆ ಮಂಗಳ ಕಾರ್ಯವನ್ನು ನೆರವೇರಿಸಲು ಆಗಲಿಲ್ಲ. ತಾಯಿಗೆ ಸಂತಸದ ಬದಲು ಮತ್ತೆ ಚಿಂತೆ ಆವರಿಸಿತು. ದುಬೈನಿಂದ ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ ತನ್ನ ಅಳಲನ್ನು ತೋಡಿಕೊಂಡ ನೆನಪಾಗಿದ್ದು ಮುಂದಿನ ಸಂಸ್ಕೃತ ಸೂಕ್ತಿ:
ಪುತ್ರೀತಿ ಜಾತಾ ಮಹತೀಹ ಚಿಂತಾ
ಕಸ್ಕೈ ಪ್ರದೇಯೇತಿ ಮಹಾನ್ ವಿತರ್ಕಃ |
ದತ್ತಾ ಸುಖಂ ಪ್ರಾಪ್ಸ್ಯತಿ ವಾ ನ ವೇತಿ
ಕನ್ಯಾಪಿತೃ ತ್ವಂ ಖಲು ನಾಮ ಕಷ್ಟಮ್ ॥
(ಮಗಳು ಹುಟ್ಟಿದಳೆಂದರೆ ಚಿಂತೆಯೇ ಹುಟ್ಟಿದಂತೆ!
ಮುಂದೆ ಯಾರಿಗೆ ಕೊಡಬೇಕೆಂದು ಒಂದು ಚಿಂತೆಯಾದರೆ ಕೊಟ್ಟರೂ ಸುಖವಾಗಿ ಇರುತ್ತಾಳೋ ಇನ್ನೊಂದು ಚಿಂತೆ ಕನ್ಯಾಪಿತೃಗಳಾಗುವುದೇ ಬಹು ದೊಡ್ಡ ಚಿಂತೆ!)
ಭಾರತೀಯ ತಾಯಂದಿರ ಮನಃಸ್ಥಿತಿಯನ್ನು ಈ ಸೂಕ್ತಿ ತುಂಬಾ ಚೆನ್ನಾಗಿ ಚಿತ್ರಿಸುತ್ತದೆ. ಅನಿವಾರ್ಯವಾಗಿ ಮುಂದೂಡಿದ್ದ ಮದುವೆ ಎಲ್ಲರಿಗೂ ಮಾನಸಿಕವಾಗಿ ಕ್ಲೇಶವನ್ನುಂಟುಮಾಡಿತು.ದುಬೈನಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ವಧು ವಿವಾಹ ಮಾಡಿಕೊಂಡು ಗಂಡನ ಜೊತೆ ಅಮೆರಿಕೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಳು. ಅನಿಶ್ಚಿತತೆಯ ಕಾರಣದಿಂದಾಗಿ ವಧೂವರರು ಅನಿರ್ದಿಷ್ಟ ಕಾಲ ಮುಂದೂಡಲು ಬಯಸದೆ ರಿಜಿಸ್ಟರ್ ಮದುವೆಯಾಗಲು ತೀರ್ಮಾನ ಕೈಗೊಂಡರು.
ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದ ತಾಯಿ ಬಹಳ ಉದ್ವೇಗಕ್ಕೆ ಒಳಗಾದರು. ಮಗಳ ಮದುವೆಯನ್ನು ಮುಂದೂಡುವಂತೆಯೂ ಇಲ್ಲ ಮಾಡುವಂತೆಯೂ ಇಲ್ಲ. ಸದ್ಯಕ್ಕೆ ಮದುವೆ ರಿಜಿಸ್ಟರ್ ಮಾಡಿಸಿ ಕೊರೊನಾ ನಂತರ ಶಾಸ್ತ್ರೋಕ್ತವಾಗಿ ಮದುವೆಯನ್ನು ಮಾಡಿಸಬಹುದಲ್ಲವೇ ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಅವರ ನಿಲುವು ನಮಗೆ ಸಮ್ಮತವಾಗಲಿಲ್ಲ. ಶಾಸ್ತ್ರಗಳು ರೂಪಿತವಾಗಿರುವುದು ಒಳ್ಳೆಯ ಉದ್ದೇಶಕ್ಕಾಗಿ. ಮದುವೆಗಾಗಿ ಶಾಸ್ತ್ರವೇ ಹೊರತು ; ಶಾಸ್ತ್ರಕ್ಕಾಗಿ ಮದುವೆ ಅಲ್ಲ. ದಂಪತಿಗಳು ಸಂಸಾರ ಆರಂಭಿಸಿದ ನಂತರ ಮದುವೆ ಶಾಸ್ತ್ರ ಮಾಡುವುದು ಸೂಕ್ತವಲ್ಲ. ಅದು ಮದುವೆಯ ವಿಡಂಬನೆಯಾಗುತ್ತದೆ. ಹೇಗೂ ವಧುವಿನ ತಂದೆ ತಾಯಿ ಮತ್ತು ಅಜ್ಜಿ ದುಬೈನಲ್ಲಿಯೇ ಇದ್ದೀರಿ. ನೀವೇ ಮುಂದೆ ನಿಂತು ವರನಿಂದ ತಾಳಿ ಕಟ್ಟಿಸಿ ಆಶೀರ್ವದಿಸಿರಿ. ಪುರೋಹಿತರು ಮಂತ್ರ ಹೇಳಿದರೆ ಮಾತ್ರ ಮದುವೆ ಎಂಬ ಭಾವನೆ ಬೇಡ.ಮಕ್ಕಳಿಗೆ ಹಿರಿಯರ ಆಶೀರ್ವಾದಕ್ಕಿಂತ ಮಿಗಿಲಾದ ಮಂತ್ರ ಯಾವುದು ಇರಲಾರದು ! ಕೊರೊನಾ ನಂತರ ಬೇಕಾದರೆ ನಂಟರಿಷ್ಟರನ್ನೆಲ್ಲಾ ಆಹ್ವಾನಿಸಿ ಭೋಜನ ಕೂಟ ಏರ್ಪಡಿಸಿರಿ.ನಮ್ಮ ಹಿತನುಡಿ ವಧುವಿನ ತಂದೆ ತಾಯಿಗೆ ಒಪ್ಪಿಗೆಯಾಯಿತು. ಮುಂಬೈನಲ್ಲಿದ್ದ ವರನ ತಂದೆತಾಯಿಗಳಾದ ಡಾ. ಸುಧಾಕರ್ ಮತ್ತು ರೂಪಾ ಮಗನ ಮದುವೆಗೆ ಖುದ್ದು ಹಾಜರಾಗಲು ಸಾಧ್ಯವಾಗದಿದ್ದರೂ ಸಮ್ಮತಿಸಿದರು. “ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ, ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯಾ”. ಎಂದು ಬಸವಣ್ಣನವರು ಹೇಳುವಂತೆ ಅವರ ಮಕ್ಕಳ ಮದುವೆ ಕಳೆದ ವಾರ ಸರಳವಾಗಿ ನೆರವೇರಿತು. ಕಲ್ಯಾಣ ಮಂಟಪದಲ್ಲಿ ಅಲ್ಲ, ಹೋಟೆಲಿನಲ್ಲೂ ಅಲ್ಲ; ವಧುವಿನ ಮನೆಯಲ್ಲಿಯೇ ಮದುವೆ! ಸಾಕ್ಷಿ ಕರಿಸಲು ನೆಂಟರಿಷ್ಟರ ದೊಡ್ಡ ಪ್ರಮಾಣದ ಜಂಗುಳಿಯು ಇಲ್ಲ. ಬೆರಳೆಣಿಕೆಯಷ್ಟು ಆತ್ಮೀಯರು ಮತ್ತು ಬಂಧುಗಳು ಮಾತ್ರ!
ವಧುವರರು ವಿಭಿನ್ನ ಧರ್ಮೀಯರಾಗಿದ್ದರೆ ಮದುವೆಯ ವಿಧಿವಿಧಾನಗಳು ವಿಭಿನ್ನವೇ ಆಗಿರುತ್ತವೆ. ವರನಾ ಧರ್ಮದ ಪ್ರಕಾರ ಮದುವೆ ನಡೆಯಬೇಕೇ ಅಥವಾ ವಧುವಿನ ಧರ್ಮದ ಪ್ರಕಾರ ನಡೆಯಬೇಕೇ ಎಂಬ ಜಿಜ್ಞಾಸೆ ಇರುತ್ತದೆ. ಸಾಮಾನ್ಯವಾಗಿಯೂ ಹುಡುಗಿ ಹುಡುಗನ ಧರ್ಮವನ್ನು ಸ್ವೀಕರಿಸಿ ಧರ್ಮದ ಪ್ರಕಾರ ಮದುವೆ ನೆರವೇರುತ್ತದೆ. ಲಿಂಗಾಯತ ಹುಡುಗ ಅನ್ಯಧರ್ಮೀಯ ಹುಡುಗಿಯನ್ನು ವರಿಸುವುದಾದರೆ ಸಾಮಾನ್ಯವಾಗಿ ಹುಡುಗಿಗೆ ಲಿಂಗದೀಕ್ಷೆಯನ್ನು ನೀಡಿ ಮದುವೆ ಮಾಡಿಸುವುದು ಹೆಚ್ಚು ರೂಢಿಯಲ್ಲಿದೆ. ವಿದ್ಯಾವಂತರಲ್ಲಿ ಕ್ರಿಶ್ಚಿಯನ್ ಹುಡುಗ/ ಹುಡುಗಿ ಹಿಂದೂ ಹುಡುಗ/ಹುಡುಗಿಯನ್ನು ಮದುವೆಯಾಗುವುದಾದರೆ ಹಿಂದೂ ಪದ್ಧತಿಯ ಪ್ರಕಾರ ಮಾಂಗಲ್ಯಧಾರಣೆ ನಂತರ ಚರ್ಚಿನಲ್ಲೂ ಮದುವೆಯನ್ನು ನೆರವೇರಿಸಲಾಗುತ್ತದೆ. ಆದರೆ ಈ ಮದುವೆಯ ಸಂದರ್ಭದಲ್ಲಿ ವಧು-ವರರಿಬ್ಬರೂ ಭಾರತೀಯರೇ. ವಧುವಿನ ತಂದೆ ಮಾಧ್ವ ಬ್ರಾಹ್ಮಣರು, ತಾಯಿ ಲಿಂಗಾಯಿತ ಧರ್ಮೀಯಳು. ಯಾವ ಸಂಪ್ರದಾಯದ ಪ್ರಕಾರ ಮದುವೆ ಮಾಡಿಸಬೇಕು ? ಇಂದು ಧರ್ಮಗಳು ಧರ್ಮಗಳಾಗಿ ಉಳಿಯದೆ ಜಾತಿಗಳಾಗಿ ರೂಪಗೊಂಡು ಭಾರತೀಯ ಸಮಾಜದಲ್ಲಿ ನಿರ್ಮಾಣವಾಗಿರುವ ಬಹುದೊಡ್ಡ ಕಂದಕವಿದು.
ಆಧುನಿಕ ತಂತ್ರಜ್ನಾನ ಬಲ್ಲವಧೂವರರು ಇದನ್ನು ಮೆಟ್ಟಿನಿಂತು ‘ವಸುದ್ಧೆವ ಕುಟುಂಬಕಮ್’ ಎನ್ನುವ ಆಶಯಕ್ಕೆ ಅನುಗುಣವಾಗಿ Virtual Wedding ಏರ್ಪಡಿಸಿ ಮುಸ್ಲಿಂ ಮೌಲ್ವಿಗಳಿಂದ ,ಕ್ರಿಶ್ಚಿಯನ್ ಪಾದ್ರಿಗಳಿಂದ ಮತ್ತು ನಮ್ಮಿಂದ Online ನಲ್ಲಿ ಶುಭಾಶೀರ್ವಾದ ಸಂದೇಶಗಳನ್ನು ಪಡೆದು ಪಾಣಿಗ್ರಹಣ ಮಾಡಿದರು. ಅಂತರ್ಜಾಲದಲ್ಲಿಯೇ ತಮ್ಮೇಲ್ಲಾ ಬಂಧುಗಳು ಮತ್ತು ಸ್ನೇಹಿತರು ವಿಕ್ಷಣೆ ಮಾಡಿ ಶುಭ ಹಾರೈಸುವಂತೆ ವ್ಯವಸ್ಥೆ ಮಾಡಿದ್ದರು.ಮುಂಬೈನಲ್ಲಿದ್ದ ವರನ ತಂದೆತಾಯಿಗಳು ಅಂತರ್ಜಾಲದಲ್ಲಿಯೇ ಮಗನ ಮದುವೆಯನ್ನು ಕಣ್ತುಂಬಿಸಿಕೊಂಡು ದೂರದಿಂದಲೇ ಹರಿಸಿದರು. ಆದರೂ ಮದುವೆಯಲ್ಲಿ ಆದರೂ ಮದುವೆಯಲ್ಲಿ ತಮ್ಮ ಬಂಧುಗಳು ಭಾಗವಹಿಸಲು ಆಗಲಿಲ್ಲವಲ್ಲಾ ಎಂಬ ವೇದನೆ ವಧುವಿನ ತಂದೆತಾಯಿಗಳಿಗೆ ಬಹಳವಾಗಿ ಬಾಧಿಸಿತು. ತನ್ನ ತಾಯಿಯ ಎಲ್ಲ ಸದ್ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದ ಮಗಳೆಂದು ಹೆಮ್ಮೆಯಿಂದ ಬಣ್ಣಿಸಿದ ತಂದೆ ಉದಯ್ ಮದುವೆ ಸಂದರ್ಭದಲ್ಲಿ ಮಗಳು ಮತ್ತು ಅಳಿಯನಿಗೆ ಹೇಳಿದ ಕಿವಿಮಾತು:
“Always remember that every relationship can be well if you understand a simple fact that “People are Not difficult, but they are merely different.we must adapt and learn how to overcome our ego” !
ಹಸೆಮಣೆಯನ್ನೇರಿದ್ದ ತನ್ನ ಮಗಳ ಹುಟ್ಟಿದ ದಿನವನ್ನು ಸ್ಮರಿಸಿಕೊಂಡ ತಂದೆ ಅಳಿಯನತ್ತ ತಿರುಗಿ ಭಾವುಕರಾಗಿ ನುಡಿದ ಮಾತು “ನನ್ನ ಮಗಳು ಹುಟ್ಟಿದಾಕ್ಷಣ ನನ್ನ ಕೈ ಸೇರಿದಾಗ ದಿಟ್ಟಿಸಿ ನೋಡಿ ಇವಳನ್ನು ಎಂದೂ ನನ್ನ ಕೈ ಯಿಂದ ಆಗಲಿ ಹೋಗಲು ಬಿಡುವುದಿಲ್ಲ ಎಂದು ಉದ್ಗರಿಸಿದ್ದೆ. ಆದರೆ ನಾವು ಸಾಕಿ ಬೆಳಸಿದ ಈ ಗಿಳಿಮರಿಯನ್ನು ಈಗ ನಮ್ಮ ಗೂಡಿನಿಂದ ನಿನ್ನೊಂದಿಗೆ ಹಾರಿ ಹೋಗಲು ಬಿಡುತ್ತಿದ್ದೇನೆ. ಇವಳನ್ನು ಚೆನ್ನಾಗಿ ನೋಡಿಕೋ, ಜಗಳ ಉಂಟಾದರೂ ಸರಿ,ನೀನು ಸುಂಟರಗಾಳಿಯಾಗಿ ಸಿಟ್ಟಿಗೆದ್ದರೂ,ಇವಳು ಎದುರಾಡದೆ ತಂಗಾಳಿ ಸುಳಿದಂತೆ ಇರುತ್ತಾಳೆ, ಅಂತಹ ಮೃದು ಸ್ವಭಾವದವಳು ಈಕೆ! ಇವಳ ಮನಸ್ಸಿಗೆ ನೋವುಂಟಾಗದಂತೆ ನೋಡಿಕೋ!” ನವ ವಧೂವರರಿಗೆ ಇದಕ್ಕಿಂತ ಹೆಚ್ಚಿನ ಮಂತ್ರೋಪದೇಶ ಬೇಕೆ?
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com