Connect with us

Dvgsuddi Kannada | online news portal | Kannada news online

ಕಾಳಿದಾಸನನ್ನು ನೆನಪಿಗೆ ತಂದ Virtual Wedding!

ಅಂಕಣ

ಕಾಳಿದಾಸನನ್ನು ನೆನಪಿಗೆ ತಂದ Virtual Wedding!

ಕೋವಿಡ್‌ ಕಾರಣದಿಂದ ಈಗ ಎಲ್ಲ ವರ್ಚುಯಲ್‌ ಮೀಟಿಂಗಗಳು, ವಿಡಿಯೋ ಕಾನ್ಫರೆನ್ಸ್‌ಗಳು ಸರ್ವೇ ಸಾಮಾನ್ಯವಾಗಿವೆ. ಸೆಮಿನಾರುಗಳ ಬದಲಿಗೆ ವೆಬಿನಾರುಗಳು ನಡೆಯುತ್ತಿವೆ. ಸುರಕ್ಷೆಯತೆಯ ಕಾರಣಕ್ಕಾಗಿ ಕೋರ್ಟುಗಳೂ ವೀಡಿಯೋ ಮೂಲಕವೇ ವಿಚಾರಣೆ ನಡೆಸುತ್ತಿವೆ. ಈ ಹಿಂದೆ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರುಗಳಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಕಲಿಸಿಕೊಡುತ್ತಿದ್ದ “Work from Home”ಸೌಲಭ್ಯವು ಈಗ ನವನಾಗರಿಕ ಸಮಾಜದ ಹೊಸ ಸಂಸ್ಕೃತಿಯಾಗಿ (New Culture) ರೂಪುಗೊಂಡಿದೆ.

ಸಮಕಾಲೀನ ಸಂದರ್ಭದಲ್ಲಿ ದೈನಂದಿನ ಎಲ್ಲ ವ್ಯವಹಾರಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವ ಅನಿವಾರ್ಯ ಪರಿಸ್ಥತಿ ಬಂದೊದಗಿದೆ. ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಪಾಠಪ್ರವಚನ ಮಾಡುವ ಏರ್ಪಾಡು ಮಾಡಿದ್ದರೂ ನೇರವಾಗಿ ತರಗತಿಗಳಲ್ಲಿ ಪಾಠ ಮಾಡಿದಂತೆ ಆಗುತ್ತಿಲ್ಲ. ಇದೇ ರೀತಿ ಕಲ್ಯಾಣ ಮಂಟಪಗಳಲ್ಲಿ ಸಾಲಂಕೃತರಾಗಿ ಕಿಕ್ಕಿರಿದು ಸೇರುತ್ತಿದ್ದ ಬೀಗರು ಬಿಜ್ಜರ ಸಂಭ್ರಮ ಈಗ ಇಲ್ಲ.ಹಸೆಮಣೆಯ ಮೇಲೆ ಕುಳಿತ ನವವಧೂವರರು ಕರ್ಣಾನಂದಕರವಾದ ಮಂಗಳವಾದ್ಯಗಳ ನಿನಾದದ ಮಧ್ಯೆ ಪುರೋಹಿತರ ಮಂತ್ರಘೋಷದೊಂದಿಗೆ ಮಾಂಗಲ್ಯಧಾರಣೆ ಮಾಡುವ ಮಾಂತ್ರಿಕತೆ ಇಲ್ಲ.ಅನ್ಯಮಾರ್ಗೋಪಾಯವಿಲ್ಲದೆ ದೇಶ ವಿದೇಶಗಳಲ್ಲಿನೆಲೆಸಿರುವ ನಂಟರಿಷ್ಟರು ಇದ್ದ ಸ್ಥಳದಿಂದಲೇ Onlineನಲ್ಲಿ login ಆಗಿ ವಿವಾಹ ವಿಧಿಗಳನ್ನು ವೀಕ್ಷಿಸಿ ನವದಂಪತಿಗಳನ್ನು ಹರಸಿದ ವಿನೂತನವಾದ Virtual Wedding ಕುರಿತು ಕಳೆದೆ ಬಾರಿ ಬರೆದ ಅಂಕಣವನ್ನು ನೀವು ಓದಿರಬಹುದು.

ವಧುವಿನ ತಂದೆತಾಯಂದಿರಾದ ಉದಯ್‌ ಮತ್ತು ಅನಿತಾ ಮುಂಬಯಿಂದ ದುಬೈಗೆ ವಲಸೆ ಹೋಗಿ ನೆಲೆಸಿದವರು. ಮದುವೆಯ ವೇಳೆ ಮುಂಬೈನಲ್ಲಿದ್ದ ವರನ ತಂದೆತಾಯಿ ಕೊರೊನಾ ಕಾರಣದಿಂದ ದುಬೈಗೆ ಹೋಗಿ ವಿವಾಹವಿಧಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ನೂತನ ದಂಪತಿಗಳನ್ನು ದೂರದಿಂದಲೇ ಮನಸಾರೆ ಆಶೀರ್ವದಿಸಿದರು; ಸೊಸೆಯನ್ನು ಮನೆದುಂಬಿಸಿಕೊಳ್ಳಲು ಸಾಧ್ಯವಾಗದಿದ್ದರೂ ಮನದುಂಬಿಕೊಂಡರು! ಸರಳವಾಗಿ ವಧುವಿನ ಮನೆಯಲ್ಲಿ ನಡೆದ ಈ ಮದುವೆಯ ಸಂದರ್ಭದಲ್ಲಿ ತಂದೆ ಉದಯ್‌ ಹಸೆಮಣೆಯ ಮೇಲೆ ಕುಳಿತಿದ್ದ ಅಳಿಯ ಆದಿತ್ಯನನ್ನು ಉದ್ದೇಶಿಸಿ ಆಡಿದ ಹೃದಯಾಂತರಾಳದ ಮಾತುಗಳು: “ನನ್ನ ಮಗಳು ಋದ್ಧಿ ಸುಂದರ ಯುವತಿ.ನಾನು ನಿನಗೆ ಮಾತು ಕೊಡನತ್ತೇನೆ ಇವಳಲ್ಲಿನ ಮಾನವೀಯತೆ ದೈಹಿಕ ಸೌಂದರ್ಯಕ್ಕಿಂತ ಸುಂದರ! ನಮ್ಮ ಮನೆಯ ಈ ‘ಮಿಂಚನ್ನು’ ನಿನ್ನ ಕೈಯಲ್ಲಿಡುತ್ತಿದ್ದೇವೆ.ಇವಳ ಸಂತಸ ಮತ್ತು ಹೊಣೆಗಾರಿಕೆ ನಿನ್ನ ಕೈಯಲ್ಲಿದೆ! ಇವಳು ಅದ್ಭುತವಾದ ಹುಡುಗಿ, ನಿನಗೆ ಅನುಕೂಲೆಯಾದ ಬಾಳ ಗೆಳಿತಿಯಾಗುತ್ತಾಳೆ. ಇವಳು ತನಗೆ ಅನುರೂಪನಾದ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ, ಅದಕ್ಕೂ ಹೆಚ್ಚಾಗಿ ಆತ್ಮಸಂಗಾತಕ್ಕಾಗಿ ನಿನ್ನನ್ನೇ ನಂಬಿದ್ದಾಳೆ! ಇನ್ನು ಮುಂದೆ ಇವಳ ಅಗಲಿಕೆ ಬಹುವಾಗಿ ನಮ್ಮನ್ನು ಕಾಡುವುದು ದಿಟ. ನಮ್ಮ ಮುಂದೆ ತಂಗಾಳಿ ಸುಳಿದಾಗ,ರುಚಿಯಾದದ್ದನ್ನು ಮೆಲ್ಲುವಾಗ, ಪ್ರೀತಿ ಮತ್ತು ಕಾಳಜಿ ನಮಗೆ ಬೇಕೆಂದಾಗ ಇವಳು ನೆನಪಾಗುತ್ತಾಳೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ಉಸಿರುಸಿರಲ್ಲೂ ಇವಳಿರುತ್ತಾಳೆ!” ಮಗಳತ್ತ ತಿರುಗಿ ಅವರು ಹೇಳಿದ ಮಾತು: “ಮಗಳೇ ನಮ್ಮನ್ನು ಬಿಟ್ಟು ಹೋಗುತ್ತಿದ್ದೇನೆಂದು ಭಾವಿಸಬೇಡ. ನಿನ್ನ ತಪ್ಪುಗಳನ್ನು ತಿದ್ದಲು ನಮ್ಮ ಮಾರ್ಗದರ್ಶನ ನಿನಗೆ ಸದಾ ಇರುತ್ತದೆ.”ವಧುವಿನ ತಂದೆಯ ಹೃದಯಾಂತರಾಳದಿಂದ ಬಂದ ಈ ಮಾತುಗಳು ಜನಪದ ಗೀತೆಯಲ್ಲಿ ಬರುವ ಈ ಮುಂದಿನ ಸಾಲುಗಳನ್ನು ನೆನಪಿಗೆ ತರುತ್ತವೆ.

ಬಂಗಾರ ಬೆಳೆವವರು ತಿಂಗಳ ಹಾದ್ಯವರು,

ನನ್ನ ಕೊಟ್ಟಾಕ ಮರೆತಾರು।

ಮಾವಿನ ಫಲವನುಣುವಾಗ ನೆನೆಸ್ಯಾರು!

ಬಲು ದೂರದ ಊರಿಗೆ ಮದುವೆ ಮಾಡಿಕೊಟ್ಟ ತವರಿನವರು ತನ್ನನ್ನು ಮರೆತಿಲ್ಲ; ಮಾವಿನ ಹಣ್ಣು ಮೆಲ್ಲುವಾಗ ತನ್ನನ್ನು ತಪ್ಪದೇ ನೆನೆಯುತ್ತಾರೆಂದು ಜನಪದ ಗೀತೆಯ ಗರತಿ ಸಮಾಧಾನ ಮಾಡಿಕೊಳ್ಳುತ್ತಾಳಂತೆ! ವಧುವಿನ ತಂದೆ ಉದಯ್‌ ಅವರ ಮನಃಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ . ಭಾರತೀಯ ನೌಕಾ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಅವರ ಹೃದಯದಲ್ಲಿ ಮಹಾಕವಿ ಕಾಳಿದಾಸನು ತನ್ನ ಪ್ರಸಿದ್ಧ ನಾಟಕ ‘ಅಭಿಜ್ಞಾನ ಶಾಕುಂತಲ’ದಲ್ಲಿ ವರ್ಣಿಸಿದ ಕಣ್ವ ಋಷಿಗಳ ಕಳವಳ ಪರಿತಾಪಗಳು ಹೆಪ್ಪುಗಟ್ಟಿದ್ದವು:

ಯಾಸ್ಕತ್ಯದ ಶಕುಂತಲೇತಿ ಹೃದಯಂ ಸಂಸ್ಕೃಷ್ಟಮುತ್ಕಂಠಯಾ
ಕಂಠಃ-ಸ್ತಂಭಿತ-ಭಾಷ್ಪ-ವೃತ್ತಿ-ಕಲುಶಃ ಚಿಂತಾ-ಜಡಂ ದರ್ಶನಮ್‌
ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದ್‌ ಅರಣ್ಯಾಕಸಃ ಪೀಡ್ಯಂತೇ ಗೃಹಿಣಃ ಕಥನ್ನು ತನಯಾ-ವಿಶ್ಲೇಷ- ದುಃಖೈರ್ನವೈಃ(ಭಾವಾನುವಾದ)

ಹೊರಟು ನಿಂತಿರುವಳು ಶಕುಂತಲೆ ಗಂಡ ದುಷ್ಕಂತನ ಅರಮನೆಗೆ,

ಕಳವಳಗೊಂಡಿದೆ ಹೃದಯ, ಕಂಠ ಬಿಗಿದು ದುಃಖ ‘ಉಮ್ಮಳಿಸುತಿದೆ!

ಸುರಿವ ಕಣ್ಣೀರ ಧಾರೆ ದೃಷ್ಟಿಯನು ಮಂಜಾಗಿಸಿದೆ;

ಸಾಕು ಮಗಳ ಅಗಲಿಕೆಯಿಂದ ತಪಸ್ವಿಯಾದ ನಾನೇ. ಇಷ್ಟು ಪರಿತಪಿಸುತ್ತಿರುವಾಗ ಹೆತ್ತ ತಂದೆ-ತಾಯಂದಿರು ಅದೆಷ್ಟು ಸಂಕಟ ಪಡುವರೋ ತಮ್ಮ ಮಗಳನ್ನು: ಮನೆಯಿಂದ ಬೀಳ್ಕೊಡುವಾಗ! ಆಶ್ರಮದಲ್ಲಿ ಬೆಳೆದ ಶಕುಂತಲೆಗೆ ಮರಗಿಡಗಳೆಂದರೆ ಪಂಚಪ್ರಾಣ. ಒಂದು ಬಳ್ಳಿಗೆ ಆಕೆ “ವನಜ್ಯೋತ್ಸೆ” ಎಂದು ನಾಮಕರಣ ಮಾಡಿದ್ದಳು. ಹೋಗುವಾಗ ‘ ಸಖಿಯರಿಗೆ ” ಸಖಿಯಲಿ! ಈ ವನಜ್ಯೋತ್ಸೆಯನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದೇನೆ!” ಎಂದು ಹೇಳುತ್ತಾಳೆ. ಆಗ ಸಖಿಯರು ಹೇಳುವ ಕರುಳರಿಯವ ಮಾತು: “ಇದನ್ನೇನೋ ನಮ್ಮ ಕೈಗೆ ಒಪ್ಪಿಸಿದೆ. ನಮ್ಮನ್ನು ಯಾರ ಕೈಗೆ ಒಪ್ಪಿಸುವೆ!”ಇದೇ ರೀತಿಯ ಭಾವ ಋದ್ವಿಯ ತಮ್ಮ ರೋಹನ್‌ದಾಗಿದೆ ಎಂಬುದು ಅವನು ನಮಗೆ ಬರೆದ ಮಿಂಚೋಲೆಯಲ್ಲಿ ಕಂಡುಬರುತ್ತದೆ: “ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಬದುಕಿನ “ಸೆಕೆಂಡ್‌ ಇನ್ನಿಂಗ್ಸ್‌ ಅನ್ನು ಅಕ್ಕ ಈಗ ಆರಂಭಿಸಿದ್ದಾಳೆ. ಹುಟ್ಟಿದಾಗಿನಿಂದ ಅವಳ ಜೊತೆಯಲ್ಲಿಯೇ ಆಡಿ ಬೆಳದಿದ್ದೇನೆ. ಈ ದಿನಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೆನಾದರೂ ಅದು ಬಂದೇಬಿಟ್ಟಾಗ ತಳಮಳಗೊಂಡಿದ್ದೇನೆ. ಕೋವಿಡ್‌ ಕಾರಣದಿಂದ ಮದುವೆ ಮುಂದೆ ಹೋದಾಗ ಅಕ್ಕನ ಜೊತೆ ಇನ್ನಷ್ಟು ದಿನ ಕಾಲ ಕಳೆಯಬಹುದೆಂಬ ಸಂತಸ ಒಂದು ಕಡೆಯಾದರೆ ಅವಳು ಖಿನ್ನಳಾಗಿರುವುದನ್ನುಕಂಡು ನೋವನ್ನೂ ಉಂಡಿದ್ದೇನೆ. ಅಕ್ಕ ನನಗೆ ಅಮ್ಮನಿದ್ದಂತೆ ಇದ್ದಳು. ಕಷ್ಟಗಳು ನನಗೆ ಎದುರಾದಾಗಲೆಲ್ಲಾ ಸಂತ್ಯಸುತ್ತಿದಳು. ಹೊರ ಪ್ರಪಂಚದಿಂದ ಅವಳು ರಕ್ಷಣೆ ನೀಡತ್ತಿದ್ದುದಷ್ಟೇ ಅಲ್ಲ ಅಪ್ಪ ಅಮ್ಮನಂದಲೂ ಬೈಸಿಕೊಳ್ಳದಂತೆ ಒಳ್ಳೆಯ ವ್ಯಕ್ತಿಯಾಗಿ ನಾನು ರೂಪುಗೊಳ್ಳುವಂತೆ ಮಾಡಿದವಳೇ ಅಕ್ಕ! ಆದರೂ ಬದುಕಿನ ಬಂಡಿ ಉರುಳಲೇಬೇಕಲ್ಲ ಈಗ ಅಕ್ಕನ ಅಗಲಿಕೆ ನನಗೆ ಅನಿವಾರ್ಯವಾಗಿದೆ. ದೂರವಿದ್ದಷ್ಟೂ ಹೃದಯಗಳು ಹತ್ತಿರವಾಗುತ್ತವೆ. ದೂರವಿದ್ದರೂ ಹೆಚ್ಚು ಹತ್ತಿರವೇ ನಿಲ್ಲುತ್ತೇವೆ.ನಮ್ಮ ಹೃದಯಗಳು, ಮನೆ ಬಾಗಿಲುಗಳು ಸದಾ ಅವಳಿಗಾಗಿ: ತೆರೆದೇಇರುತ್ತವೆ; ನಮ್ಮ ಬಾಹುಗಳು ಚಾಚಿಕೊಂಡೇ ಇರುತ್ತವೆ!”

ಈ ಇಬ್ಬರೂ ಮಕ್ಕಳನ್ನು ನಾವು ತೊಟ್ಟಿಲ ಕೂಸಾಗಿದ್ದ ವಯೋಮಾನದಿಂದ ಬಲ್ಲೆವು.ಕಾಲ ಎಷ್ಟು ಬೇಗ ಉರುಳಿ ಹೋಗುತ್ತದೆ! ಅದು ಕೇವಲ ನಿಮ್ಮನ್ನು ಅಗಲಿಸುವುದಿಲ್ಲ;ಅದು ಬೆಸೆಯುತ್ತದೆ ಸಹ. ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅಗಲಿಕೆ ಮತ್ತು ಒಂದಾಗುವಿಕೆಯ ಅಪೂರ್ವ ಅನುಭವ ಪಡೆಯುತ್ತಾರೆ. ಆಗಲಿಕೆಯು ಯಾವಾಗಲೂ ನೋವನ್ನೇ ತರಬೇಕೆಂದಿಲ್ಲ. ಗರ್ಭದಿಂದ ಮಗುವು ಬೇರ್ಪಡುವಾಗ ತಾಯಿ ಮತ್ತು ಮಗು ಇಬ್ಬರಿಗೂ ನೋವಿನ ಸಂದರ್ಭವೇ.ಆದರೆ, ಮಗು ಒಡಲಿನಿಂದ ತಾಯಿಯ ಮಡಿಲಿಗೆ ಸೇರಿದ ನಂತರ ನೋವೆಲ್ಲಾ ಮರೆತು ಹೋಗುತ್ತದೆ. ತಾಯಿ ಮಗು ಇಬ್ಬರೂ ಸಂತಸಭರಿತರಾಗುತ್ತಾರೆ. ಅವರ ಆನಂದಕ್ಕೆ ಪಾರವೇ ಇರುವುದಿಲ್ಲ. ತನ್ನ ಕಂದ ಯಾವಾಗಲೂ ತನ್ನ ಪಕ್ಕೆದಲ್ಲಿಯೇ ಇರಬೇಕೆಂದು ತಾಯಿಯೂ ಹಂಬಲಿಸುವುದು ಸಹಜ. ಆದರೆ ಯಾವ ತಾಯಿಯೂ ತನ್ನ ಮಗಳು ಮದುವೆಯಾಗದೆ ಯಾವಾಗಲೂ ತನ್ನ ಜೊತೆಯಲ್ಲಿರಲಿ ಎಂದು ಬಯಸಲಾರಳು. ತನ್ನ ಮಗಳು ಮದುವೆಯಾಗಿ ಅನುರೂಪ ಗಂಡನ ಕೈಹಿಡಿಯುವುದನ್ನು ನೋಡುವ ಆಸೆ ಪ್ರತಿಯೊಬ್ಬ ತಾಯಿಗೂ ಇರುತ್ತದೆ. ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ ಮಾತ್ರಕ್ಕೆ ಮದುವೆ ಯಶಸ್ವಿಯಾಗುವುದಿಲ್ಲ. ಎರಡು ಜೀವಗಳ ಭಾವನಾತ್ಮಕ ಬಿಸುಗೆಯಿಂದಮಾತ್ರ ಅದು ಸಾಧ್ಯ.

ಮದುವೆಯ ಸಂದರ್ಭದಲ್ಲಿ ಮುಖ್ಯವಾಗಿ ಬಾಹ್ಯ ಸೌಂದರ್ಯವೇ ಯುವಕ ಯುವತಿಯರ ಆಕರ್ಷಣೆಗೆ ಕಾರಣವಾಗಿದ್ದರೂ ಕೊನೆಗೆ ಹೃದಯ ಸೌಂದರ್ಯವೇ ಅವರಿಬ್ಬರನ್ನು ಬಾಳಿನುದ್ದಕ್ಕೂ ಪ್ರೀತಿಯ ಬೆಸುಗೆಯಲ್ಲಿ ಒಂದುಗೂಡಿಸಲು ಸಾಧ್ಯ. ಮದುವೆಯ ಯಶಸ್ಸಿಗೆ ಮುಖ್ಯವಾಗಿ ಬೇಕಾಗಿರುವುದು ಪತಿ-ಪತ್ನಿಯರ ಭಾವನಾತ್ಮಕ ಹೊಂದಾಣಿಕೆ.ಬಾಳಿನಲ್ಲಿ ಸುಖ ಸಂತೋಷ! ಮತ್ತು ನೆಮ್ಮದಿಗಳನ್ನು ಪಡೆಯಬೇಕೆಂದರೆ ಕಣ್ಣೆರಡಾದರೂ ನೋಡುವ ನೋಟ ಹೇಗೆ ಒಂದೋ, ಕೈಗಳು ಎರಡಾದರೂ ಮಾಡುವಕಾರ್ಯ ಹೇಗೆ ಒಂದೋ, ಕಾಲುಗಳು ಎರಡಾದರೂ ನಡೆಯುವ ನಡಿಗೆ ಹೇಗೆ ಒಂದೋ, ಹಾಗೆ ಪತಿ-ಪತ್ನಿಯರು ಏನೇ ಸಮಸ್ಯೆ ಬಂದರೂ ಒಂದುಗೂಡಿ ನೋಡಬೇಕು, ಒಂದುಗೂಡಿ ಎದುರಿಸಬೇಕು, ಒಂದುಗೂಡಿ ಮುನ್ನಡೆಯಬೇಕು. ಮದುವೆಯ ಸಂದರ್ಭದಲ್ಲಿ ಸಾಂಪ್ರದಾಯಿಕಾವಾಗಿ ಪುರೋಹಿತರು ಹೇಳಿಕೊಡುವ ”ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಾಮಿ”(ಧರ್ಮ, ಅರ್ಥ,ಕಾಮಗಳಲ್ಲಿ ನಾನು ಅತಿಕ್ರಮಿಸುವುದಿಲ್ಲ!) ಎಂಬ ಮಂತ್ರದ ಆಶಯವಾದರೂ ಇದೇ ಆಗಿದೆ. ವೈವಾಹಿಕ ಬದುಕನ್ನು ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮಾಡಿಕೊಳ್ಳುವುದಾಗಲೀ, ನರಕವನ್ನಾಗಿ ಸಿಕೊಳ್ಳುವುದಾಗಲೀ ದಂಪತಿಗಳ ಕೈಯಲ್ಲಿದೆ. ಇಲ್ಲದಿದ್ದರೆ ಮದುವೆಯನ್ನು ಕುರಿತು ಒಬ್ಬ ಅಜ್ಞಾತ ಅಂಗ್ಲಕವಿ ಮಾರ್ಮಿಕವಾಗಿ ಹೇಳುವಂತೆ;

Marriage is a beautiful fort

Those who are outside it

Wanto get into it curiously!

Those who are inside it

Want to get out of it desperately!”

ಮದುವೆ ಎಂಬುದೊಂದು ಸುಂದರವಾದ ಕೋಟೆ.

ಹೊರಗಿದ್ದವರಿಗೆ ಒಳಗೆ ಹೋಗಬೇಕೆಂಬ ಕೌತುಕ

ಒಳಗಿದ್ದವರಿಗೆ ಉಸಿರು ಕಟ್ಟಿದಂತಾಗಿ.

ಹೊರಗೆ ಓಡಿ ಹೋಗಬೇಕೆಂಬ ಹತಾಶೆ!

-ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ,  ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top