Connect with us

Dvgsuddi Kannada | online news portal | Kannada news online

ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ…!

ಪ್ರಮುಖ ಸುದ್ದಿ

ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ…!

  • ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಸಿರಿಗೆರೆ

ಹೋದೆಯಾ ಪಿಶಾಚಿ ಅಂದರೆ ಬಂತು ಗವಾಕ್ಷೀಲಿ ಎಂಬ ಗಾದೆಮಾತು ಇವತ್ತಿನ ಕೋರೊನಾ ವೈರಾಣು ವಿಗೆ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ , ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಹಾದು ಮಹಾರಾಷ್ಟ್ರಕ್ಕೆ ಪಾದಾರ್ಪಣೆ ಮಾಡುತ್ತೀರಿ. ಬೆಂಗಳೂರು ಕೆಂಪುವಲಯ.

ಧಾರವಾಡ ಬೆಳಗಾವಿ ಜಿಲ್ಲೆಗಳು ಕೆಂಪು ವಲಯಗಳೇ. ಮಹಾರಾಷ್ಟ್ರ ವಿಷಯವನ್ನು ಹೇಳುವುದೇ ಬೇಡ; ಅದು ಕೆಂಪೋ: ಕೆಂಪು! ಇದುವರೆಗೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ- ಈ ನಾಲ್ಕು ಜಿಲ್ಲೆಗಳು ಹಸಿರು ವಲಯಗಳಾಗಿದ್ದವು. ಈ ಜಿಲ್ಲೆಗಳ ಜನರು ‘ ಸದ್ಯ ನಮ್ಮಲ್ಲಿ ಇಲ್ಲ’ವೆಂದು ನೆಮ್ಮದಿಯನ್ನು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೊರೊನಾ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆಂಬ ಅರಿವು ಇದ್ದರೂ ಅಪಾಯ ಮನೆ ಬಾಗಿಲು ತಟ್ಟಿಲ್ಲವೆಂಬ ತುಸು ನೆಮ್ಮದಿ ಇತ್ತು.

ಈಗ ಇದ್ದಕ್ಕಿದ್ದಂತೆ ಎಲ್ಲಾ ಜಿಲ್ಲೆಗಳಿಗೂ ಕೋರೊನಾ ಮಾರಿ ವಕ್ಕರಿಸಿದೆ; ಇದುವರೆಗೆ ಇದ್ದ ಅಲ್ಪ ನೆಮ್ಮದಿಯೂ ಈಗ ಮರೀಚಿಕೆಯಾಗಿದೆ. ಹಸಿರು ವಲಯವಾಗಿದ್ದ ದಾವಣಗೆರೆ ಈಗ ಕೊರೊನಾ ಸೋಂಕಿನಲ್ಲಿ ಮೂರನೆಯ ರಾಂಕ್ ಪಡೆದಿದೆ! ದಾವಣಗೆರೆಯಲ್ಲಿ ಅನೇಕ ರೋಗಿಗಳ ಶುಶ್ರಷೆ ಮಾಡಿದ್ದ ನರ್ಸ್ ಗೆ ಸೋಂಕು ತಗಲಿ ಹಾಸಿಗೆ ಹಿಡಿಯಬೇಕಾಯಿತು. ಚಿತ್ರದುರ್ಗದಲ್ಲಿ ಅಹಮದಾಬಾದಿನಿಂದ ಹಿಂದಿರುಗಿದ ಸೋಂಕಿತ ವ್ಯಕ್ತಿಗಳು ಈಗ ಗುಣಮುಖರಾಗುತ್ತಿದ್ದಾರೆ. ಆದರೆ ಅವರಿಗೆ ಊಟಕ್ಕೆ ಒಯ್ದು ಕೊಟ್ಟ ಒಬ್ಬ ವೃದ್ಧ ಕೊನೆಯುಸಿರೆಳೆದಿದ್ದಾನೆ. ಮಾನವತೆಯನ್ನು ಮೆರೆದಾತ ಮರಣ ಹೊಂದಬೇಕೇ? ಇದಲ್ಲವೇ ಮಹಾ ದುರಂತ!

ದಿನೇದಿನೆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಇವರಲ್ಲಿ ಮುಕ್ಕಾಲುಪಾಲು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಜನರೇ ಆಗಿದ್ದಾರೆ. ದುಡಿಮೆಗಾಗಿಯೋ, ಪೇಟೆಯ ಆಕರ್ಷಣೆಯಿಂದಲೋ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋದ ಜನ ಈಗ ಹಳ್ಳಿಗಳಿಗೆ ಮರಳಿ ಧಾವಿಸುತ್ತಿದ್ದಾರೆ. ಅವರನ್ನು ಊರೊಳಗೆ ಬಿಟ್ಟುಕೊಳ್ಳಲು ಹಳ್ಳಿಯ ಜನರು ಹೆದರುತ್ತಿದ್ದಾರೆ.

ಪೇಟೆಯವರೆಂದರೆ ನಡೆಮುಡಿ ಹಾಸಿ ಬರಮಾಡಿಕೊಳ್ಳುತ್ತಿದ್ದ ಹಳ್ಳಿಗರು ಈಗ ಯಾರನ್ನು ಬಿಟ್ಟುಕೊಳ್ಳದಂತೆ ಹಲಗೆ ಸಾರಿಸುತ್ತಿದ್ದಾರೆ. ಜಿಲ್ಲಾಡಳಿತಗಳು ಹೊರರಾಜ್ಯಗಳಿಂದ ಬಂದವರನ್ನು ತಂತಮ್ಮ ಮನೆಗಳಿಗೆ ಹೋಗದಂತೆ ತಡೆದು ಮೊದಲು ಸಾಂಸ್ಥಿಕ ವಾಸ್ತವ್ಯದಲ್ಲಿ (Institutional Quarentine) ಇರಿಸಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ನಿಗದಿತ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಚಿಕಿತ್ಸೆಗೆ ಏರ್ಪಾಡು ಮಾಡುತ್ತಿದ್ದಾರೆ. ಹೀಗಾಗಿ ದಿನೇದಿನೇ ಸೋಂಕಿತರ ಸಂಖ್ಯೆ ಪಾದರಸದಂತೆ ಏರುತ್ತಿದೆ. ಸೋಂಕಿತರ ಸಂಖ್ಯೆ ಜಾಸ್ತಿ ಆದಷ್ಟೂ ಅಪಾಯವೆಂದು ಜನರು ತಿಳಿದುಕೊಂಡಿರುವುದು ಸರಿಯಲ್ಲ.

ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿ ಚಿಕಿತ್ಸೆ ನೀಡಿ ಗುಣಪಡಿಸಿ ಕಳಿಸುವುದು ಸೋಂಕನ್ನು ಎದುರಿಸಲು ಇರುವ ಏಕೈಕ ಮಾರ್ಗವಾಗಿದೆ. ಇದು ನಿಜಕ್ಕೂ ಕಷ್ಟದ ಹಾಗೂ ಸವಾಲಿನ ಕೆಲಸ. ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ಸೇರಿದಂತೆ ಸರ್ಕಾರಿ ನೌಕರರು ದಿನದ ಇಪ್ಪತ್ನಾಲ್ಕೂ ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಇವರನ್ನು ‘ಕೊರೊನಾ ಯೋಧರು’ ಎಂದು ಕರೆಯಲಾಗುತ್ತಿರುವುದು ಅರ್ಥಪೂರ್ಣವಾಗಿದೆ. ಇವರಲ್ಲಿ ಅನೇಕರು ತಮ್ಮ ಮಕ್ಕಳಿಂದ ದೂರವಿದ್ದು ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಸ್ವತಃ ತಾವೇ ಸೊಂಕಿಗೆ ಒಳಗಾಗಿ
ಬಲಿಯಾಗಿರುವವ ನಿದರ್ಶನಗಳಿಗೂ ಕೊರತೆಯಿಲ್ಲ! ಒಂದು ಕಡೆ ಇವರ ಮಾನವೀಯ ಸೇವೆಯನ್ನು ಪ್ರಶಂಸೆ ಮಾಡಿ ಚಪ್ಪಾಳೆ ತಟ್ಟಿದ ಜನರೇ ಮತ್ತೊಂದೆಡೆ ಆಸ್ಪತ್ರೆಯಿಂದ ಮನೆಗೆ ಬಂದ ಈ ವೈದ್ಯರನ್ನು ಪಕ್ಕದ ಮನೆಯವರು ಬಿಟ್ಟುಕೊಳ್ಳದೆ ಅಮಾನವೀಯವಾಗಿ ವರ್ತಿಸಿದ ಉದಾಹರಣೆಗಳು ಇವೆ.

ಕೊರೊನಾ ವಿರುದ್ಧ ಯುದ್ಧ ಸಮರ್ಥ ರೀತಿಯಲ್ಲಿ ನಡೆಯುತ್ತಿದ್ದರೂ ಜನರ ಸಹಕಾರವಿಲ್ಲದೆ ಯಾವ ಜಿಲ್ಲಾಡಳಿತವು ಏನು ಮಾಡಲು ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸದಿದ್ದರೆ ಸೋಂಕು ನಿಯಂತ್ರಣಕ್ಕೆ ಬರುವುದೇ ಇಲ್ಲ. ಗಂಟಲು ದ್ರವ ಪರೀಕ್ಷೆಯ ಫಲಿತಾಂಶಗಳನ್ನು ಅಂದಂದೇ ನೀಡಲು ಸಾಧ್ಯವಾಗದಿರುವುದರಿಂದ ತಡವಾಗಿ ವರದಿಗಳು ಬರುವುದರಿಂದ ಸಂಖ್ಯೆಯು ಏರುಮುಖವಾಗಿ ಚಲಿಸಿದಂತೆ ಕಾಣುತ್ತದೆ. ಇದಕ್ಕಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಎಷ್ಟೇ ಜನ ಸೋಂಕಿತರಿದ್ದರೂ ಅವರನ್ನೆಲ್ಲಾ ಸಾಂಸ್ಥಿಕ ವಾಸ್ತವ್ಯದಲ್ಲಿ ಇರಿಸುವುದರಿಂದ ಅಪಾಯವಂತೂ ಇರಲಾರದು. ಬಾಟಲಿಯಲ್ಲಿ ತುಂಬಿ ಬಿರುಡೆ ಹಾಕಿ ಭೂತವನ್ನು ಬಂಧಿಸಿ ಇಟ್ಟಂತಾಗಿದೆ!

ಚೀನಾದಿಂದ ಸಂಚರಿಸಿದ ವೈರಾಣು ಇಂಗ್ಲೆಂಡ್ , ಇಟಲಿ, ಅಮೆರಿಕದಲ್ಲಿ ಉಂಟುಮಾಡಿರುವ ಸಾವು ನೋವುಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಆಗಿರುವ ಜೀವಹಾನಿ ಅತ್ಯಲ್ಪವೇ ಸರಿ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಮೆರಿಕ ಮತ್ತು ಐರೋಪ್ಯ ನಗರಗಳಲ್ಲಿ ಅದು ಮಾಡಿರುವ ರುದ್ರನರ್ತನಕ್ಕೆ ಹೋಲಿಸಿದರೆ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನಮ್ಮ ದೇಶದಲ್ಲಿ ಅದರ ಕೀಟಲೆ ಕಡಿಮೆಯೆಂದೇ ಹೇಳಬೇಕು. ಅಷ್ಟರಮಟ್ಟಿಗೆ ಭಾರತದಲ್ಲಿ ಹುಟ್ಟಿದ ಜನರು ಪುಣ್ಯ ಜೀವಿಗಳು! ‘ಪರದ್ರವ್ಯೇಷು ಲೋಷ್ಟವತ್ ‘ ಅಂದರೆ ಪರರ ಹಣ ಪಾಶಾಣವಿದ್ದಂತೆ; ಅದಕ್ಕೆ ಆಸೆ ಪಡಬಾರದು ಎಂದು ಈ ಪುಣ್ಯಭೂಮಿಯಲ್ಲಿ ಸಾವಿರಾರು ವರ್ಷಗಳಿಂದ ಋಷಿಮುನಿಗಳು, ಸಾಧುಸಂತರು ಬೋಧಿಸುತ್ತಾ ಬಂದಿದ್ದಾರೆ. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ.ದಾರಿಯಲ್ಲಿ ಕರೆನ್ಸಿ ನೋಟು ಬಿದ್ದಿದ್ದರೆ ನೋಡಿದ ಜನ ಮುಟ್ಟಲು ಅಂಜುತ್ತಿದ್ದಾರೆ. ಆದರೆ, ತಾನು ದುಡಿಯದ ಹಣ ತನ್ನದಲ್ಲ, ಅದಕ್ಕೆ ಆಸೆ ಪಡಬಾರದು ಎಂಬ ಧಾರ್ಮಿಕ ಪ್ರಜ್ಞೆಯಿಂದ ಅಲ್ಲ. ಯಾರೋ ನೋಟಿಗೆ ಉಗುಳು ಹಚ್ಚಿ ಕೊರೊನಾ ಹಬ್ಬಿಸಲು ಮಾಡಿರುವ ಸಂಚು ಇರಬಹುದೆಂಬ ಭಯದಿಂದ!

Lockdown ಸಂದರ್ಭದಲ್ಲಿ ಜನರು ತಿಂಗಳಾನುಗಟ್ಟಲೆ ಗೃಹ ಬಂಧನಕ್ಕೆ ಒಳಗಾಗಿದ್ದರೂ ಅವರ ಮನಸ್ಸಿನಲ್ಲಿರುವ ಸುಪ್ತ ಪ್ರತಿಭೆ ಮಾತ್ರ Lockdown ಆಗಿಲ್ಲ. ನಿತ್ಯವೂ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿರುವ ನೂರಾರು ಕವಿತೆ, ಪ್ರಹಸನ, ಚುಟುಕು, ಕಿರುಗಥೆಗಳು, ವ್ಯಂಗ್ಯಚಿತ್ರಗಳು ಇದಕ್ಕೆ ಸಾಕ್ಷಿ . ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಎನ್ನುವ ಕವಿರಾಜಮಾರ್ಗದ ಪ್ರಸಿದ್ದ ಸಾಲನ್ನು ನೆನಪಿಗೆ ತರುತ್ತವೆ. ಅವುಗಳಲ್ಲಿ ತಿಳಿಹಾಸ್ಯ, ವ್ಯಂಗ್ಯ, ಮೂದಲಿಕೆ, ಎಚ್ಚರಿಕೆ, ತಿಳುವಳಿಕೆಗಳು ಹಾಸುಹೊಕ್ಕಾಗಿವೆ. ಅವು ಬದುಕಿನ ಕಟುವಾಸ್ತವತೆಯನ್ನು ಜೀವನ ಸತ್ಯವನ್ನು ನಮ್ಮ ಮುಂದಿರಿಸಿವೆ. ಕಠಿಣವಾದ ಇಂದಿನ ದಾರುಣ ಪರಿಸ್ಥಿತಿಯಲ್ಲಿಯೂ ಸಂದರ್ಭಕ್ಕೆ ತಕ್ಕಂತೆ ಜನರು ಹೇಗೆ ಸ್ಪಂದಿಸಿದ್ದಾರೆ ಎಂಬುದನ್ನು ಈ ಕೆಳಕಂಡ ಆಯ್ದ ಸಂದೇಶಗಳಿಂದ ತಿಳಿಯಬಹುದು;

● ಈಗ ಇರೋದು ಎರಡೇ ಕಾಲ: ಮನೆಯೊಳಗಿದ್ದರೆ ಉಳಿಗಾಲ. ಹೊರಗಡೆ ಬಂದರೆ ಕೊನೆಗಾಲ.
●ಹೊರಗಡೆಯಿಂದ ಗಂಡ ತನ್ನ ಪತ್ನಿ ಭಾರತಿಯನ್ನು ಪ್ರೀತಿಯಿಂದ ‘ಬಾರು,ಬಾರು’ ಅಂತ ಕೂಗಿದ, ದಾರಿಯಲ್ಲಿ ಹೋಗೋನು ‘ಅಣ್ಣ ನಾಳೆ ಓಪನ್ ಆಗುತ್ತೆ’ ಅನ್ನ ಬೇಕಾ!
● ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು ಮಗಳಿಗೆ ಗದರಿಸುತ್ತಿದ್ದಾರೆ. ಅವಳು ಮಾಡಿದ ತಪ್ಪೆಂದರೆ ” ಕೊರೋನಾ ಹಬ್ಬಕ್ಕೆ ಈ ವರ್ಷ ಮಾತ್ರ ರಜಾ ಕೊಡ್ತಾರೋ , ವರ್ಷ ವರ್ಷಾನು ರಜಾ ಕೊಡ್ತಾರೋ!” ಎಂದು ಕೇಳಿದ್ದು!
● ಎಲ್ಲಾ ಪ್ರಾಣಿಗಳು ದೇವರ ಹತ್ತಿರ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತವೆ. ದೇವರು ಅವುಗಳಿಗೆ ಪರಿಹಾರ ಸೂಚಿಸುತ್ತಾನೆ. ಮನುಷ್ಯರು ದೇವರಲ್ಲಿ ಬೇಡಿಕೊಳ್ಳುತ್ತಾರೆ: ದೇವಾಧಿದೇವಾ ಈಗ ವಕ್ಕರಿಸಿರುವ ಕೊರೊನಾ ಮಾರಿಯಿಂದ ಯಾವಾಗ ಮುಕ್ತಿ ಕೊಡುತ್ತೀಯಾ/ ಅದಕ್ಕೆ ದೇವರು ತಣ್ಣಗೆ ಹೇಳಿದನಂತೆ
“ಅದು ನನ್ನ ಕೈಯಲ್ಲಿಲ್ಲ ; ನಿಮ್ಮ ಕೈಯಲ್ಲೇ ಇದೆ!”

● ಒಂದು ವಿಡಿಯೋದಲ್ಲಿ ಪೊಲೀಸರು ಸಾದರಪಡಿಸಿದ ಬೀದಿ ನಾಟಕ: ಯಮಧರ್ಮ ಕೈಯಲ್ಲಿ ಪಾಶವನ್ನು ಹಿಡಿದು ಠೀವಿಯಿಂದ ನಡೆಯುತ್ತಿದ್ದರೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿಯ ಪದ್ಯವನ್ನು ನೆನಪಿಸುವಂತೆ ಅವನನ್ನು ಹಿಂಬಾಲಿಸಿ ಜನರ ಹಿಂಡೋ ಹಿಂಡು!

● ವಿಡಿಯೋಗಳಲ್ಲಿ ನಿರ್ಜನ ರಸ್ತೆಗಳಲ್ಲಿ ವಿಹರಿಸುವ ನವಿಲುಗಳು, ಮರಿಗಳ ಜೊತೆ ವಾಕಿಂಗ್ ಮಾಡುತ್ತಿರುವ ಆನೆಗಳು, ಆಕಳಿಸುತ್ತಾ ಮಲಗಿ ರಸ್ತೆಯನ್ನು ಸೀಲ್ ಮಾಡಿರುವ ಹುಲಿ ಸಿಂಹಗಳು!

● ಪಾಪಗಳನ್ನು ತೊಳೆದು ಕೊಳ್ಳುವಂತೆ Saniitizer ಕೊಟ್ಟು ಎಚ್ಚರಿಸುತ್ತದೆ. ಕೆಟ್ಟದ್ದು ಮಾತನಾಡಬೇಡಿ ಎಂದು mask ಕೊಟ್ಟು ಗದರಿಸುತ್ತದೆ. ದುಷ್ಟರಿಂದ ದೂರ ಎಂದು distance ಪಾಲಿಸಲು ಸೂಚಿಸುತ್ತದೆ. ಕಾಲ ಮೌನವಾಗಿ ಎಲ್ಲವನ್ನೂ ಹೇಳುತ್ತದೆ. ಆದರೆ ನಾವೇ ಕೇಳುವುದಿಲ್ಲ.
●ಕೊರೊನಾ ಮಂಡ್ಯದಲ್ಲಿ ಸಕ್ಕರೆ ತಗೊಂಡು, ದಾವಣಗೆರೆಯಲ್ಲಿ ಬೆಣ್ಣೆದೋಸೆ ತಿನ್ಕೊಂಡು, ಶಿವಮೊಗ್ಗದಲ್ಲಿ ಎಲೆ ಅಡಿಕೆ ಹಾಕ್ಕೊಂಡು, ಚಿಕ್ಕಮಗಳೂರಲ್ಲಿ ಕಾಫಿ ಕುಡ್ಕೊಂಡು, ರಾತ್ರಿ ಉಡುಪಿಗೆ ನೀನು ಊಟಕ್ಕೆ ಹೊರಟಿದೆ. ಇನ್ನೂ ನಾಳೆಗೆ ಏನ್ ಏನ್ ಪ್ಲಾನ್ ಇದೆಯೋ ಕಾಣೆ?

ಕೊರೊನಾದಿಂದ ಕಲಿತ ಪಾಠ ಏನು:

1 ಅಮೇರಿಕ ಪ್ರಪಂಚದ ಶಕ್ತಿಶಾಲಿ ರಾಷ್ಟ್ರ ಎಂಬುದು ಸುಳ್ಳಾಯಿತು.

2. ಚೀನಾ ಯಾವುದೇ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸದೆ ಮೂರನೇ ಮಹಾಯುದ್ಧವನ್ನು ಗೆದ್ದಿತು.

3.ಯೂರೋಪಿಯನ್ನರು ಪ್ರಪಂಚ ತಿಳಿದುಕೊಂಡಷ್ಟು ಜಾಣರಲ್ಲ.

4. ಶ್ರೀಮಂತರಿಗೆ ಬಡಜನರಿಗಿಂತ ರೋಗನಿರೋಧಕ ಶಕ್ತಿ ಕಡಿಮೆ ಎಂಬ ವಿಷಯ ತಿಳಿಯಿತು.

5.ಯಾವ ಪೂಜಾರಿ, ಪಾದ್ರಿ, ಮುಲ್ಲಾರಿಗೂ ರೋಗಿಗಳನ್ನು ಬದುಕಿಸಲು ಸಾಧ್ಯವಿಲ್ಲ ಎಂಬ ಅರಿವಾಯಿತು.

6. ತೈಲಕ್ಕೆ ಬಳಕೆದಾರರು ಇಲ್ಲದೆ ಬೆಲೆ ಇಲ್ಲ.

7. ಕ್ವಾರಂಟೈನ್ ನಿಂದ ನಮಗೆ ಬೇಸರ ಉಂಟಾಗಿರುವಂತೆ Zooನಲ್ಲಿರುವ ಪ್ರಾಣಿಗಳಿಗೂ ಆಗಿರಬಹುದು.

8. ಮನುಷ್ಯನ ಅಡೆತಡೆ ಇಲ್ಲದಿದ್ದರೆ ಪ್ರಕೃತಿ ತ್ವರಿತಗತಿಯಲ್ಲಿ ನಳನಳಿಸುತ್ತದೆ.

9.ಅನೇಕರು ಮನೆಯಲ್ಲೇ ಇದ್ದುಕೊಂಡು ಸುಲಭವಾಗಿ ಕೆಲಸ ಮಾಡಬಹುದು.

10. ಓಡಾಟ ಇಲ್ಲದೇ ಬದುಕಬಹುದು.

11. ಆರೋಗ್ಯಕರವಾದ ಜೀವನ ನಡೆಸುವುದು ಕಷ್ಟವೇನಲ್ಲ.

12. ಗಂಡಸರೂ ಅಡುಗೆ ಮಾಡಬಹುದು.

13. ಚಿತ್ರನಟರು ಬರೀ ಮನೋರಂಜನೆ ನೀಡಬಲ್ಲರು ಅಷ್ಟೇ ನಿಜವಾದ ಹೀರೋಗಳಲ್ಲ.

14. ಜೀವನ ತುಂಬಾ ನಾಜೂಕು ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು.

ಒಂದು ನಿಮಿಷವೂ ಸಮಯವಿಲ್ಲವೆಂದು ಒತ್ತಡದಲ್ಲಿ ಅಲೆಯುತ್ತಿದ್ದಿರಿ, ಅನ್ನನಿದ್ದೆ ಇಲ್ಲದೆ ಆಸ್ತಿ ಮಾಡಿದಿರಿ, ಸಾಕೀಗ ನೀವು ವಿಶ್ರಾಂತಿ ಪಡೆಯಿರಿ.
●Note Ban ಆದಾಗ ಅಂಗಡಿಗಳು ತೆರೆದಿದ್ದವು, ಆದರೆ ಕೈಯಲ್ಲಿ ಹಣವಿರಲಿಲ್ಲ.Lockdown ಆದಾಗ ಕೈಯಲ್ಲಿ ಹಣವಿದೆ. ಆದರೆ ಅಂಗಡಿಗಳು ತೆರೆಯಲಿಲ್ಲ. ಮುಂದೆ ಹಣವು ಇರುತ್ತೆ , ಅಂಗಡಿಗಳು ತೆರೆಯುತ್ತವೆ. ಈಗ ನೀನು ಮನೆಯೊಳಗೆ ಇರದಿದ್ದರೆ ಮುಂದೆ ಕೊಳ್ಳಲು ನೀನೇ ಇರುವುದಿಲ್ಲ.!

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top