Connect with us

Dvgsuddi Kannada | online news portal | Kannada news online

ಹಾರುವ ನೊಣಕ್ಕೆ ಆಸೆಪಡುವ ಹಾವಿನ ಬಾಯ ಕಪ್ಪೆಗಳು..!

ಪ್ರಮುಖ ಸುದ್ದಿ

ಹಾರುವ ನೊಣಕ್ಕೆ ಆಸೆಪಡುವ ಹಾವಿನ ಬಾಯ ಕಪ್ಪೆಗಳು..!

-ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು

ಡೀ ಜಗತ್ತು ಕೊರೋನ ಮಹಾಮಾರಿಯ ದವಡೆಯಲ್ಲಿ ಸಿಲುಕಿ ನಲುಗುತ್ತಿದೆ. ಹಾಗಿದ್ದರೂ ನಮ್ಮ ಜನರು ಪದೇಪದೇ ಎಚ್ಚರ ತಪ್ಪುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿರಿ ಎಂದು ಅವರ ಹಿತದೃಷ್ಟಿಯಿಂದ ಸರ್ಕಾರ ಹೇಳಿದರು, ಪೊಲೀಸರು ಲಾಠಿ ಸವಿ ತೋರಿಸಿದರು, ಮಾಧ್ಯಮಗಳು ನಿರಂತರ ಬೊಬ್ಬೆ ಹೊಡೆದರು ಜಪ್ಪಯ್ಯ ಎನ್ನುತ್ತಿಲ್ಲ. ಅರ್ಧ ಲೀಟರ್ ಉಚಿತ ಹಾಲಿಗೆ ನೂಕುನುಗ್ಗಲು, ಮಾರಾಮಾರಿ! ತರಕಾರಿಗೆ, ದಿನಸಿಗೆ, ಹಣ್ಣುಹಂಪಲಿಗೆ ಮುಗಿಬೀಳುತ್ತಾರೆ. ಇದನ್ನೆಲ್ಲಾ ನೋಡುತ್ತಿದ್ದ ನೋಡುತ್ತಿದ್ದರೆ ನೆನಪಾಗುವುದು ಬಸವಣ್ಣನವರ ಈ ಕೆಳಗಿನ ವಚನ:

ಹಾವಿನ ಬಾಯಿ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ-
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೆಸುಕಾಲ ಬದುಕುವನೋ?
ಕೆಡುವೊಡಲ ನಚ್ಚಿ ಕಡುಹುಸಿಯನೆ ಹುಸಿದು, ಒಡಲ ಹೊರೆವರ-
ಕೂಡಲಸಂಗಮದೇವನೊಲ್ಲ ಕಾಣಿರಣ್ಣಾ.

ಬಸವಣ್ಣನವರು ಇಲ್ಲಿ ಬಳಸಿರುವ ಹಾವಿನ ಬಾಯ ಕಪ್ಪೆಯ ಉಪಮೆಯೂ ಪ್ರಸ್ತುತ ಸಂದರ್ಭದಲ್ಲಿ ಅರ್ಥಗರ್ಭಿತ. ಕಪ್ಪೆಯು ಹಾವಿನ ಬಾಯಿಯಲ್ಲಿ ಸಿಲುಕಿಕೊಂಡಿದೆ‌. ಹಾವು ಕಪ್ಪೆಯನ್ನು ಯಾವಾಗ ನುಂಗಿ ನೊಣೆಯುತ್ತೋ ಹೇಳಲು ಬಾರದು. ಆದರೆ ಕಪ್ಪೆಗೆ ಅದರ ಅರಿವು ಇಲ್ಲ. ಕೆಲವೇ ಕ್ಷಣಗಳಲ್ಲಿ ಬಂದೆರಗುವ ಬರುವ ಸಾವಿನ ಪ್ರಜ್ಞೆ ಇಲ್ಲದೆ ತನ್ನ ಮುಂದೆ ಹಾರುವ ನೊಣವನ್ನು ನೋಡಿ ಆಸೆಪಟ್ಟು ಹಿಡಿದು ತಿನ್ನಲು ಹಾತೊರೆಯುತ್ತದೆ. ಕೆಂಪು ವಲಯದಲ್ಲಿರುವ ಬೆಂಗಳೂರು ಮತ್ತಿತರ ನಗರ ಪ್ರದೇಶದ ನಮ್ಮ ಜನರು ಹೀಗೆ ಹಾವಿನ ಬಾಯ ಕಪ್ಪೆಗಳಾಗುತ್ತಿದ್ದಾರೆ. ಕಾರಣ ಎಂಬ ಹಾವಿನ ದವಡೆಯಲ್ಲಿ ಸಿಲುಕಿದ್ದೇವೆ ಎಂಬ ಪರಿವೇ ಇಲ್ಲ ಎಚ್ಚರ ತಪ್ಪಿದರೆ ಈ ಮಹಾಮಾರಿ ತಮ್ಮನ್ನು ನುಂಗುವುದು ಶತಸಿದ್ಧ ಎಂದು ಗೊತ್ತಿದ್ದರೂ ಹಾವಿನ ಬಾಯ ಕಪ್ಪೆ ವರ್ತಿಸುತ್ತಿದ್ದಾರೆ.

ಬಸವಣ್ಣನವರೇ ಮತ್ತೊಂದೆಡೆ ಹೇಳುವಂತೆ ‘ತುಪ್ಪದ ಸವಿಗೆ ಅಲಗಾ ನೆಕ್ಕುವ ಸೊಣಗನಂತೆ’ ಬಹಳ ಜನರು ವರ್ತಿಸುತ್ತಿದ್ದಾರೆ. ತುಪ್ಪ ಸವರಿದ ಹರಿತವಾದ ಕತ್ತಿಯನ್ನು ನಾಯಿ ನೆಕ್ಕುತ್ತದೆ. ಅದರ ನಾಲಿಗೆಯಿಂದ ನೆತ್ತರು ಹರಿಯುವ ಪರಿವೆಯಿಲ್ಲದೆ ತುಪ್ಪದ ಸವಿಗೆ ಮಾರುಹೋಗಿ ಪುನಃ ಪುನಃ ನೆಕ್ಕುತ್ತಲೇ ಇರುತ್ತದೆ. ಕಪ್ಪೆ, ನಾಯಿಗಳಿಗೆ ತಿಳಿಯುವುದಿಲ್ಲವೆಂದರೆ ಬುದ್ದಿವಂಗ ಮನುಷ್ಯನಿಗೆ ಪ್ರಾಣಿ ಎನಿಸಿದ ಮನುಷ್ಯನಿಗೇಕೆ ತಿಳಿಯುವುದಿಲ್ಲ ? ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತಿವೆ, ರಸ್ತೆಗಳ ಮೇಲೆ, ಸಮುದ್ರದ ತೀರಗಳಲ್ಲಿ ಸ್ವಚ್ಛಂದವಾಗಿ ಕುಣಿದು ಕುಪ್ಪಳಿಸಿ ಖುಷಿಪಡುತ್ತೇವೆ. ಆದರೆ ನಾಡಿನಲ್ಲಿರುವ ‘ಪ್ರಾಣಿ’ ಗಳು ಮುದುರಿಕೊಂಡು ಮನೆಯಲ್ಲಿ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಲಾಕ್ ಡೌನ್ ಯಾವಾಗ ಮುಗಿಯುತ್ತದೆ ಎಂದು ಜನ ಹಪಹಪಿಸುತ್ತಿದ್ದಾರೆ. ಮುಂಬೈನಲ್ಲಿರುವ ಶಿಷ್ಯರೊಂದಿಗೆ ದೂರವಾಣಿಯಲ್ಲಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಿರುವಾಗ ಅವರಿಂದ ಬಂದ ಪ್ರತಿಕ್ರಿಯೆ:

“ಐಸಾ ಲಗ್ತಾ ಹೈ ಕಿ ಹಮೇಂ 15 ಆಗಸ್ತ್ ಕೋ ಹೀ ಸ್ವತಂತ್ರತಾ ಮಿಲೇಗೀ!”

ದುಡ್ಡಿನ ಮೇಲೆ ದುರಾಸೆ ಇರಬಾರದು ಎಂದು ಸಾವಿರಾರು ವರ್ಷಗಳಿಂದ ಸಾಧು- ಸಂತರು, ಋಷಿ-ಮುನಿಗಳು, ಧರ್ಮಗುರುಗಳು ಉಪದೇಶ ಮಾಡುತ್ತಾ ಬಂದರು ಕಲಿಯದ ಈ ಜನರಿಗೆ ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಪಾಠ ಕಲಿಸಿದೆ. ಸಾವು ನೋವುಗಳಿಂದ ತತ್ತರಿಸಿದ ಇಟಲಿಯ ಶ್ರೀಮಂತರು ತಾವು ವಾಸವಾಗಿರುವ ಐಷಾರಾಮಿ ಮನೆಗಳಿಂದ ಬೀದಿಗೆ ನೋಟುಗಳ ಕಂತೆಯನ್ನು ಚೆಲ್ಲಿದರು ಅದನ್ನು ಬಾಚಿಕೊಳ್ಳುವ ಜನರು ರಸ್ತೆಯಲ್ಲಿ ಇಲ್ಲ ಎಂಬ ದೃಶ್ಯವುಳ್ಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಷ್ಟರಮಟ್ಟಿಗೆ ದುಡ್ಡಿನ ಮೇಲಿನ ಮೋಹವನ್ನು ಕೊರೊನಾ ವೈರಾಣೂ ಕಿತ್ತುಹಾಕಿದೆ. ಆದರೆ ಹಣದ ಮೇಲಿನ ಮೋಹವನ್ನು ಕಳೆದಿದೆಯೇ ಹೊರತು ಕುಡಿತದ ಚಟವನ್ನಲ್ಲ. ದಾರಿಯಲ್ಲಿ ಬಿದ್ದ ನೋಟಿನ ಕಂತೆಗಳನ್ನು ಬಾಚಿಕೊಳ್ಳುವ ಜನರು ಇಲ್ಲದಿರಬಹುದು. ಆದರೆ ಮದ್ಯದ ಅಂಗಡಿಗಳಿಗೆ ಕನ್ನ ಕೊರೆದು ಮದ್ಯದ ಬಾಟಲಿಗಳನ್ನು ದೋಚುವ ಪಾನ ಪ್ರಿಯರು ಇದ್ದಾರೆ. ಮದ್ಯ ಮಾರಾಟಕ್ಕೆ ಸರಕಾರ ಪರವಾನಿಗೆ ಕೊಡುತ್ತಿದ್ದಂತೆಯೇ ಪಾನ ಪ್ರಿಯರು ಮದ್ಯದ ಅಂಗಡಿಯ ಬಾಗಿಲಿಗೇ ಪೂಜೆ ಸಲ್ಲಿಸಿ, ಆರತಿ ಎತ್ತಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮದ್ಯದ ಅಂಗಡಿಯ ಮಾಲೀಕ ಬರುವ ಮೊದಲೇ ಅಂಗಡಿಯ ಮುಂದೆ ಸಾಲಾಗಿ ನಿಂತಿದ್ದ ಕುಡುಕರಲ್ಲಿದ್ದ ಶಿಸ್ತು ಮಾರುಕಟ್ಟೆಯಲ್ಲಿ ಹಣ್ಣು, ಹಾಲು ತರಕಾರಿ ಕೊಳ್ಳಲು ನಿಂತಿದ್ದ ಜನರಲ್ಲಿ ಕಾಣಲಿಲ್ಲ! ಮದ್ಯದ ಅಂಗಡಿಯ ಮುಂದೆ ಪುರುಷರೇ ಏಕೆ ಸರತಿಯ ಸಾಲಿನಲ್ಲಿ ಮಹಿಳೆಯರೂ ನಿಂತಿರುವ ದೃಶ್ಯ ನೈತಿಕ ಅಧಃಪತನದ ಹೆಜ್ಜೆಗುರುತು. ಜನರು ಮದ್ಯದ ದಾಸರಾಗಿದ್ದಾರೆ, ನಿಜ. ಸರಕಾರಗಳು ಸಹ ಮದ್ಯದ ದಾಸ್ಯಕ್ಕೆ ಒಳಗಾಗಿವೆ. ತಮ್ಮ ಬರಿದಾದ ಖಜಾನೆಗಳನ್ನು ತುಂಬಿಸಿಕೊಳ್ಳಲು ಕುಡುಕರನ್ನೇ ಆಶ್ರಯಿಸಿವೆ. ಸರಕಾರವನ್ನು ನಡೆಸಲು ಕುಡುಕರು ನೆರವಾದಷ್ಟು ಬೇರೆಯವರು ಯಾರೂ ನೆರವಾಗಿಲ್ಲ. ಒಂದೇ ದಿನ ರಾಜ್ಯದ ಬೊಕ್ಕಸಕ್ಕೆ 35 ಕೋಟಿ ರೂಗಳು. ಪ್ರಜಾಪ್ರಭುತ್ವದಲ್ಲಿ ಜನರ, ಜನರಿಂದ,ಜನರಿಗಾಗಿ ಇರಬೇಕಾದ ಸರಕಾರ ಕುಡುಕರ, ಕುಡುಕರಿಂದ, ಕುಡುಕರಿಗಾಗಿ ಇರುವಂತಾಗಿದೆ.ದೂರದರ್ಶನದಲ್ಲಿ ಹರಿಹರದ ವ್ಯಕ್ತಿಯೊಬ್ಬ ಬಾರ್ ಅಂಗಡಿಗಳನ್ನು ಯಾವಾಗ ತೆರೆಯುತ್ತೀರಿ ಸಾರ್ ಎಂದು ಕೇಳಿದ್ದಕ್ಕೆ ಮಾಜಿ ಅಬಕಾರಿ ಸಚಿವರು ಒಬ್ಬರು ಕೊಟ್ಟ ಅಪರೂಪದ ಉತ್ತರ:

‘ಸದ್ಯ ಬದುಕುವುದನ್ನು ನೋಡಪ್ಪ’!

‘ಚೆಲುವ ಕನ್ನಡನಾಡು ಕುಡುಕರ ಬೀಡು ಆಗದಿರಲಿ’ ಎಂದು ಕರೆಕೊಟ್ಟ ಇಲ್ಲಿಗೆ ಸರಿಯಾಗಿ 30 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಮೊಟ್ಟಮೊದಲು ಆರಂಭಿಸಿದ ನಮ್ಮ ‘ಪಾನನಿಷೇಧ ಆಂದೋಲನ'(1990) ಈಗ ಸಾರ್ವಜನಿಕರ ಸ್ಮೃತಿಯಲ್ಲಿ ಮರೆತುಹೋದ ಅಧ್ಯಾಯವಾಗಿದೆ.ಆಗ ಪಾನ ಸಂಹಿತೆಯ ಮಂಡಳಿಯ ಅಧ್ಯಕ್ಷರಾಗಿದ್ದವರು ನಮ್ಮೊಂದಿಗೆ ಸಮಾಲೋಚನೆ ನಡೆಸಲು ಸಿರಿಗೆರೆಗೆ ಬರಬೇಕೆಂದು ಬಯಸಿದಾಗ ಮೊದಲು ನಿಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ ಎಂದು ಸವಾಲು ಹಾಕಿದ್ದು ಕೆಲವರಿಗಾದರೂ ನೆನಪಿರಬಹುದು. ನಂತರ ಹಳ್ಳಿಹಳ್ಳಿಗಳಲ್ಲಿ ಜನರನ್ನು ಸಂಘಟಿಸಿ ಆಂದೋಲನಕ್ಕೆ ಬೆಂಬಲ ದೊರೆತರೆ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಆಗಿನ ಎಲ್ಲಾ ಪ್ರಮುಖ ಮಠಾಧೀಶರ, ಸಮಾಜ ಪ್ರಮುಖರ, ರಾಜಕೀಯ ಧುರೀಣರ ಸಭೆ ಕರೆಯಲಾಗಿತ್ತು. ಅದೊಂದು ವಿಧಾನಸಭೆಯ ಪರ್ಯಾಯ ಸಭೆಯಾಗಿ ರೂಪುಗೊಂಡಿತ್ತು. ಅದೇ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಏರ್ಪಾಡಾಗಿದ್ದ ವಿಧಾನಸಭೆಯ ಅಧಿವೇಶನದ ಕುರ್ಚಿಗಳು ಖಾಲಿ! ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್. ಪಟೇಲರು ದಂಗಾಗಿ ತಮ್ಮ ಪ್ರತಿನಿಧಿಗಳನ್ನಾಗಿ ಅವರ ಸಚಿವ ಸಂಪುಟದ ಸದಸ್ಯರಾದ ಎಸ್. ಎಸ್ ಪಾಟೀಲರು,ಎಂ.ಪಿ.ಪ್ರಕಾಶ್ ರವರು ಮತ್ತು ಲೀಲಾದೇವಿ ಆರ್ ಪ್ರಸಾದ್ ರವರನ್ನು ಕಳಿಸಿಕೊಟ್ಟಿದ್ದರು. ಮುಖ್ಯಮಂತ್ರಿಗಳು ಒಂದೆರಡು ದಿನಗಳಲ್ಲಿಯೇ! ರಾಜ್ಯಾದ್ಯಂತ ಪಾನನಿಷೇಧ ಜಾರಿಯಾಗುವಂತೆ ಆದೇಶ ಹೊರಡಿಸಲು ತಾತ್ವಿಕವಾಗಿ ಒಪ್ಪಿದ್ದಾರೆಂದು ಎಂದು ಹಿರಿಯ ಸಚಿವರು ವರದಿ ಮಾಡಿದ್ದು ಅಂದು ಸೇರಿದವರೆಲ್ಲರಿಗೂ ಸಂತೋಷವನ್ನು ಉಂಟುಮಾಡಿತು.ಆದರೆ ಚಾತಕಪಕ್ಷಿಗಳಂತೆ ಕಾದುಕುಳಿತಿದ್ದ ನಮಗೆ ಅಂತಹ ಯಾವ ಆದೇಶವು ಸರ್ಕಾರದಿಂದ ಹೊರಡಲಿಲ್ಲ.ಪ್ರತಿನಿದಿಗಳಾಗಿ ಬಂದವರ ಮಾತನ್ನು ನಂಬಿ ನಾವೆಲ್ಲಾ ಮೋಸಹೋದೆವು. ಪಟೇಲರು ಮುಂದಿನ ಚುನಾವಣೆಯಲ್ಲಿ ಪರಾಭವಗೊಂಡು ದಾವಣಗೆರೆ ಸಮೀಪದ ಒಂದು ಹಳ್ಳಿ ಸಮಾರಂಭದಲ್ಲಿ ನಮ್ಮನ್ನು ಭೇಟಿಯಾದಾಗ ಅವರು ಮೆಲುದನಿಯಲ್ಲಿ ನಮಗೆ ಹೇಳಿದ್ದು: “ನಾನು ತಮಗೆ ಮಾತುಕೊಟ್ಟು ತಪ್ಪಿದೆ ಎನ್ನುವ ಅಪರಾಧಿ ಪ್ರಜ್ಞೆಯು ತುಂಬಾ ಕಾಡಿಸುತ್ತಿದೆ!”

ಪಾನ ನಿಷೇಧವನ್ನು ಜಾರಿಗೆ ತಂದರೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ ಎಂಬ ವಾದ ನಿನ್ನೆ ಮೊನ್ನೆಯದಲ್ಲ. ಎರಡು ಶತಮಾನಗಳ ಹಿಂದೆ ‘ಮೈಸೂರು ಹುಲಿ’ ಎಂದೇ ಪ್ರಖ್ಯಾತನಾದ ಟಿಪ್ಪು ಸುಲ್ತಾನ ತನ್ನ ಆಳ್ವಿಕೆಯಲ್ಲಿ ಪಾನ ನಿಷೇಧ ಜಾರಿ ಮಾಡಿ ಹೊರಡಿಸಿದ್ದ ಆದೇಶ ಇಲ್ಲಿ ಸ್ಮರಣೀಯ.ನಮ್ಮ ವಿಧಾನಸೌಧ ಪತ್ರಗಾರದಲ್ಲಿರುವ ಈ ಆದೇಶದ ಆಯ್ದಭಾಗಗಳು ಕೆಳಕಂಡಂತಿವೆ:

“ನಮ್ಮಜನರ, ಸಾಮಾಜಿಕ ಆರ್ಥಿಕ ಮತ್ತು ನೈತಿಕ ಹಿತದೃಷ್ಟಿಯಿಂದ ಮದ್ಯದ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿದೇಶಿಯರಿಗೆ ಮಾರಾಟ ಮಾಡುವುದಕ್ಕೆ ಮಾತ್ರ ಕಡಿಮೆ ಪ್ರಮಾಣದಲ್ಲಿ ತಯಾರಿಸಲು ಲೈಸೆನ್ಸ್ ನೋಡಬಹುದು.”

(ಟಿಪ್ಪುವಿನ ರವಿನ್ಯೂ ನಿಯಮ ನಿಯಮಾವಳಿಗಳು 1787)

“ಮದ್ಯವನ್ನು ತಯಾರು ಮಾಡದಂತೆ ಮತ್ತು ಮಾರಾಟ ಮಾಡದಂತೆ ಕಟ್ಟುನಿಟ್ಟಾಗಿ ಪಾನನಿಷೇಧವನ್ನು ಜಾರಿಗೆ ತಂದಿರುವುದಾಗಿಯೂ ಮತ್ತು ಎಲ್ಲಾ ಮಾರಾಟಗಾರರಿಂದ ಮದ್ಯದ ಮಾರಾಟ ಮಾಡದಂತೆ ಮುಚ್ಚಳಿಕೆಯನ್ನು ಬರಸಿಕೊಂಡಿರುವುದಾಗಿಯೂನೀವು ಮಾಡಿಕೊಂಡಿರುವ ವರದಿಯೂ ವೇದ್ಯವಾಯಿತು. ಇಷ್ಟೇ ಸಾಲದು, ಮದ್ಯವನ್ನು ಮಾರಾಟ ಮಾಡುವವರಿಂದಲೂ ಇದೇ ರೀತಿಯ ಮುಚ್ಚಳಿಕೆಯನ್ನು ನೀವು ಬರೆಸಿಕೊಳ್ಳತಕ್ಕದ್ದು ಮತ್ತು ಅವರು ಯಾವುದಾದರೂ ಉದ್ಯೋಗವನ್ನು ಕೈಗೊಳ್ಳುವಂತೆ ನೆರವಾಗುವುದು.”-

(ಬೆಂಗಳೂರಿನ ಅಮಾಲ್ದರ್ ಗುಲಾಮರಿಗೆ ಹೈದರ್ ಗೆ ಟಿಪ್ಪುಸುಲ್ತಾನ್ 14-1-1787ರಂದು ಬರೆದ ಪತ್ರ).

ಹೀಗೆ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ ಎಂದು ಟಿಪ್ಪುವಿನ ಹಣಕಾಸು ಸಚಿವನಾದ ಮೀರ್ ಸಾದಿಕ್ ಅಪಸ್ವರ ಎತ್ತುತ್ತಾನೆ. ಈಗಲೂ ಅದೇ ಅಪಸ್ವರ ಇದೆ.
ಇದಕ್ಕೆ ಟಿಪ್ಪು ಕೊಟ್ಟ ದಿಟ್ಟ ಉತ್ತರ ಇಲ್ಲಿದೆ, ನೋಡಿ:

 

“ಹಣಕಾಸಿನ ಕಾರಣಗಳಿಂದಾಗಿ ನಾವು ಈ ವಿಚಾರವಾಗಿ ಅಂಜಬೇಕಾಗಿಲ್ಲ. ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತರಲು ನನ್ನ ಹೃದಯ ಹಾತೊರೆಯುತ್ತಿದೆ. ಇದು ಧರ್ಮದ ಪ್ರಶ್ನೆ ಮಾತ್ರವಲ್ಲ ನಮ್ಮ ಜನರ ಆರ್ಥಿಕ ಸುಸ್ಥಿತಿ ಮತ್ತು ನೈತಿಕ ಉನ್ನತಿ ಮತ್ತು ಎಲ್ಲಕ್ಕೂ ಮಿಗಿಲಾಗಿ ನಮ್ಮ ಯುವಪೀಳಿಗೆಯ ಚಾರಿತ್ರ್ಯ ನಿರ್ಮಾಣ ಇವೆಲ್ಲವುಗಳ ಬಗ್ಗೆ ನಾವು ಅವಶ್ಯವಾಗಿ ಚಿಂತಿಸಬೇಕಾಗಿದೆ. ತಕ್ಷಣವೇ ಜಾರಿಗೆ ತರುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ ಎಂಬ ಎಂಬ ಕಳಕಳಿಯನ್ನು ನಾನು ಮೆಚ್ಚುತ್ತೇನೆ. ಆದರೆ ಹೀಗೆಯೇ ಬಿಟ್ಟರೆ ಮುಂದಿನ ಭವಿಷ್ಯ ಏನಾದೀತು ಎಂಬ ಬಗ್ಗೆ ನಾವು ಯೋಚಿಸಬೇಡವೇ? ನಮ್ಮ ಜನರ ಆರೋಗ್ಯ ಮತ್ತು ನೈತಿಕತೆಯ ಉನ್ತತಿಗಿಂತ ನಮ್ಮ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯವೇ ಹೆಚ್ಚು ಮುಖ್ಯವಾಗಬೇಕೆ?…”

(ಟಿಪ್ಪುಸುಲ್ತಾನ್ ಮೀರ್ ಸಾದಿಕ್ ನಿಗೆ ಕಳುಹಿಸಿದ ನಿರೂಪ 1787)

ಟಿಪ್ಪುವಿನ ಈ ದಿಟ್ಟ ನಿರ್ಧಾರದಂತೆ ನಮ್ಮ ಸರಕಾರಗಳ ನಿರ್ಧಾರವು ಅಚಲವಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳ ಯಾವ ಒತ್ತಡಗಳಿಗೆ ಮಣಿಯದೆ ಅದಮ್ಯವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ಅದು ಮುಖ್ಯವಲ್ಲ. ಈ ನಾಡಿನ ಜನರ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ಆರೋಗ್ಯಕರವಾದ ಬೇರೆ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು. ಹಲವು ದಶಕಗಳಿಂದ ಮೂಕವೇದನೆ ಅನುಭವಿಸುತ್ತಾ ಬಂದಿರುವ ಈ ನಾಡಿನ ಅಮಾಯಕ ಮಹಿಳೆಯರ ಗೋಳು ನಿವಾರಣೆಯಾಗಬೇಕಲ್ಲವೆ?ಇಲ್ಲವೇ 21ನೇ ಶತಮಾನದಲ್ಲಿ ದಾಪುಗಾಲಿಟ್ಟು ವಿಜ್ಞಾನ?ತಂತ್ರಜ್ಞಾನದಲ್ಲಿ ಮುಂದುವರೆದಿದ್ದೇವೆಂದು ಬೀಗುವ ನಮ್ಮ ಯುವಪೀಳಿಗೆ ನೈತಿಕವಾಗಿ ಹಿಮಾಲಯದ ಎತ್ತರಕ್ಕೆ ಬೆಳೆದು ನಿಂತಿದೆಯೇ ಅಥವಾ ಕೊಳಕು ಚರಂಡಿಯಲ್ಲಿ ಬಿದ್ದಿದೆಯೇ? ನಮ್ಮ ಚೆಲುವ ಕನ್ನಡನಾಡು ಕುಡುಕರ ಆಗಬೇಕ?

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top