Connect with us

Dvgsuddi Kannada | online news portal | Kannada news online

ಇವನಮ್ಮವನೆಂದು ಎದೆಗಪ್ಪಿಕೊಳ್ಳುವ ಕಾಲವಿದು..!

ಪ್ರಮುಖ ಸುದ್ದಿ

ಇವನಮ್ಮವನೆಂದು ಎದೆಗಪ್ಪಿಕೊಳ್ಳುವ ಕಾಲವಿದು..!

ವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.
ಬಸವಣ್ಣನವರ ಈ ವಚನ ನನಗೆ ಹಿಂದೆಂದಿಗಿಂತಲೂ ಈಗ ಪ್ರಸ್ತುತವೆನಿಸುತ್ತದೆ. ಅವನಾರು ಇವನಾರು ಅಂತ ಎಣಿಸುವ ಸಮಯವಲ್ಲ ಇದು. ಇವ ನಮ್ಮವ ಇವ ನಮ್ಮವ ಎಂದು ಎದೆಗಪ್ಪಿಕೊಳ್ಳುವ ಸಮಯ. ಮಹಾಮನೆಯೇ ಆಗಿರುವ ಈ ಜಗದಲ್ಲಿ ಎಲ್ಲರೂ ಮನೆಯ ಮಕ್ಕಳೆ. ಯಾರು ಹೆಚ್ಚು ಯಾರು ಕಡಿಮೆ. ಕೈ ಚಾಚಿದರೆ ಬಿದ್ದವನೂ ಎದ್ದೇಳುತ್ತಾನೆ. ಪ್ರೀತಿ ತೋರಿದರೆ ಬರಡು ನೆಲವೂ ಬಂಗಾರವಾಗುತ್ತದೆ.

ಬೇಕಾಗಿರುವುದು ಹಿಡಿ ಪ್ರೀತಿ ಜೊತೆಗೆ ನಮ್ಮವರೆನ್ನುವ ಭಾವ.
ಹನ್ನೆರಡನೇ ಶತಮಾನದ ಬಸವಣ್ಣ ಆ ಕಾಲಕ್ಕೆ ನೊಂದವರ, ದೀನದಲಿತರ ಉದ್ಧಾರಕ್ಕೆ ನಿಂತರು. ಕೆಳವರ್ಗದವರನ್ನ ಮೇಲ್ವರ್ಗದವರು ಅತ್ಯಂತ ಹೀನಾಯವಾಗಿ ಕಾಣುತಿದ್ದ ಸಮಯ ಅದು. ಆ ಮೇಲುಕೀಳನ್ನ ಹೋಗಲಾಡಿಸಲೆಂದೇ ಬಸವಣ್ಣನವರ ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಸಮಾನತೆ, ಸಹಬಾಳ್ವೆಗಾಗಿ ಕೈ ಚಾಚಿದರು. ಕಠೋರ ಮಡಿಮೈಲಿಗೆ ಜಾತಿಧರ್ಮವನ್ನೇ ಹಾಸಿ ಹೊದ್ದು ಮಲಗಿದ್ದ ಆ ಕಾಲದಲ್ಲಿ ಬಸವಣ್ಣನವರ ಹೋರಾಟವೇನು ಸುಲಭದ ಮಾತಾಗಿರಲಿಲ್ಲ. ಆದರೂ ಅವರು ಬಿಜ್ಜಳನ ವಿರುದ್ಧ, ಅಂಧಶ್ರದ್ಧೆಯ ವಿರುದ್ಧ ಸಿಡಿದು ನಿಂತು ಅನುಭವ ಮಂಟಪ ನಿರ್ಮಿಸಿದರು. ಅದರಡಿ ಎಲ್ಲ ವರ್ಗದವರನ್ನೂ ಬರಮಾಡಿಕೊಂಡರು. ಇವತ್ತಿಗೂ ನಾನು ಹೇಳುವುದಿಷ್ಟೆ. ನಮ್ಮ ಮನಗಳು ಮಹಾಮನೆಯಾಗದ ಹೊರತು ಬಸವಣ್ಣನವರನ್ನ ಸುಖಾಸುಮ್ಮನೆ ಪೂಜಿಸಿ ಫಲವಿಲ್ಲ!

ಇಂದು ಬಸವ ಜಯಂತಿ. ಬಸವನ ಅನುಯಾಯಿಗಳಲ್ಲ, ಸಕಲ ವರ್ಗದವರೂ ಬಸವಣ್ಣನವರನ್ನು ಆರಾಧಿಸುತ್ತೇವೆ. ಆರಾಧಿಸಿ. ಇದರ ಜೊತೆಗೆ ಮುಖ್ಯವಾಗಿ ಮಾಡಬೇಕಾದ ಇನ್ನೊಂದು ಕಾಯಕವೂ ಇದೆ. ಇಡೀ ಜಗತ್ತು ಕೊರೋನಾ ಪೀಡಿತವಾಗಿದೆ. ಜನ ಮನೆಯಿಂದ ಹೊರಬರುವಹಾಗಿಲ್ಲ. ಮನಸು ವಿಹ್ವಲಗೊಂಡಿದೆ. ಭಯ ಆವರಿಸಿದೆ. ಮನುಷ್ಯ ಇಷ್ಟು ಅಸಹಾಯಕನಾಗಿದ್ದು ಹತಾಷೆಗೊಂಡಿದ್ದು ನಮ್ಮ ಕಾಲಘಟ್ಟದಲ್ಲಿ ಇದೇ ಮೊದಲೇನೋ! ಇಂಥ ಸಮಯದಲ್ಲಿ ಮನೆಯಲ್ಲೇ ಬಸವ ಜಯಂತಿಯನ್ನ ಸರಳವಾಗಿ ಆಚರಿಸೋದು ಸೂಕ್ತ ಮಾರ್ಗ. ನಮ್ಮ ಮನೆಯಲ್ಲೇ ಒಬ್ಬರಿಗೆ ದುಃಖವಾದಾಗ ನಾವು ಪಾಯಸ ಮಾಡಿಕೊಂಡು ತಿಂತೀವಾ? ಇಲ್ಲವಲ್ಲ. ಆರೈಕೆಗೆ ನಿಲ್ಲುತ್ತೇವೆ. ಈ ಸಂಕಷ್ಟದಲ್ಲೂ ಅದನ್ನೆ ಮಾಡಬೇಕು.

‘ಬೇಡುವವರಿಲ್ಲದೆ ಬಡವನಾದೆ’ ಅನ್ನುತ್ತಾರೆ ಬಸವಣ್ಣನವರು. ಕಲ್ಯಾಣದಲ್ಲಿ ಕೊಡುವವರಿರಲಿಲ್ಲವೆಂದಲ್ಲ. ಆದರೆ ಯಾರೂ ಬೇಡುತ್ತಿರಲಿಲ್ಲ. ಕಾಯಕವೇ ಕೈಲಾಸ ತತ್ವದ ಬೀಜ ಮೊಳಕೆಯೊಡೆದು ಎಲ್ಲರ ಎದೆಯಲ್ಲಿ ಹೆಮ್ಮರವಾಗಿ ನಿಂತಿತ್ತು. ದುಡಿದು ತಿನ್ನುವುದು, ಹಂಚಿ ತಿನ್ನುವುದು ಶಿವನಿಗೆ ಒಪ್ಪುತ್ತದೆ ಅಂತಲೇ ಲಕ್ಷ ಲಕ್ಷ ಶರಣರು ಭಾವಿಸಿದ್ದರು.
ಆ ಶರಣರ ಭಾವವೊಂದು ಈಗಲೂ ಬೇಕಾಗಿದೆ. ಬೇಡುವವರಿದ್ದಾರೆ. ಕೊಡುವವರು?

ಬಸವ ಜಯಂತಿಯನ್ನ ಆದಷ್ಟೂ ಬಸವ ತತ್ವದಂತೆ, ಅವರ ಆದರ್ಶದಂತೆ ಆಚರಿಸೋಣ. ನಮ್ಮ ಸುತ್ತಮುತ್ತ ಈಗ ನೊಂದವರಿದ್ದಾರೆ. ಬಡವರಿದ್ದಾರೆ. ದುಃಖಿಗಳಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಅಸಹಾಯಕರಾಗಿ ನಿಂತವರಿದ್ದಾರೆ. ಅವರೆಲ್ಲಾ ಬೇರಾರು ಅಲ್ಲ. ನಮ್ಮವರೆ. ಯಾವ ಜಾತಿ? ಯಾವ ಧರ್ಮ? ಯಾವ ಪಂಗಡ? ಪ್ರೀತಿಯ ವಿಷಯಕ್ಕೆ ಬಂದರೆ ಎಲ್ಲರದ್ದೂ ಮನುಷ್ಯ ಜಾತಿಯೆ. ಮಾನವ ಪ್ರೇಮ ಎಲ್ಲಕ್ಕೂ ಮಿಗಿಲು.
ದಯಮಾಡಿ ನಿಮ್ಮ ಅಕ್ಕಪಕ್ಕದ ಸೋತ ಕೈಗಳಿಗೆ ಕೈಲಾದಷ್ಟು ಸಹಾಯ ಮಾಡಿ. ಎರಡು ತುತ್ತಿದ್ದರೆ ಒಂದು ತುತ್ತು ಹಸಿದವರೊಟ್ಟಿಗೆ ಹಂಚಿಕೊಳ್ಳಿ. ನೀವು ಮಲಗಿ ಇನ್ನೂ ಅಷ್ಟು ಜಾಗವಿದ್ದರೆ ಆಶ್ರಯ ಕೊಡಿ. ಅದೇ ದಾಸೋಹ. ಒಂದು ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಯಾರೂ ಏಕಾಂಗಿಯಲ್ಲ. ಯಾರೂ ದುಃಖಿಗಳಲ್ಲ.
ಜೊತೆಗಿದ್ದವನು ಕೈ ಚಾಚುವ ತನಕ.
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು..

-ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top