ಈ ಭೂಮಿಯ ಮೇಲೆ ಮನುಷ್ಯ ಜೀವಿಯ ಸೃಷ್ಟಿಯಾದಂದಿನಿಂದಲೂ ಕೋಟ್ಯಾನುಕೋಟಿ ಜನ ಹುಟ್ಟಿದ್ದಾರೆ ಮತ್ತು ಕೊನೆಯುಸಿರೆಳೆದಿದ್ದಾರೆ. ಆದರೆ ಅವರು ಯಾರನ್ನೂ ಈ ಜಗತ್ತು ನೆನಪಿಟ್ಟುಕೊಂಡಿಲ್ಲ. ಏಕೆಂದರೆ ಅವರು ಈ ಜಗತ್ತು ನೆನಪಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ.ಇದಕ್ಕೆ ವಿಭಿನ್ನವಾಗಿ ಸಾರ್ವಜನಿಕರ ಸ್ಮೃತಿ ಎಷ್ಟೇ ದುರ್ಬಲವಾಗಿದ್ದರೂ ಮನುಕುಲ ಸದಾ ನೆನಪಿಟ್ಟುಕೊಳ್ಳುವಂತಹ ಛಾಪು ಮೂಡಿಸಿದ ಅಸಾಧಾರಣ ವ್ಯಕ್ತಿಗಳು ಅನೇಕರು ಹುಟ್ಟಿ ಕಣ್ಮರೆಯಾಗಿದ್ದಾರೆ.
ಅವರಲ್ಲಿ ಕನ್ನಡ ನಾಡಿನ ಭವ್ಯ ಇತಿಹಾಸದ ಮಧ್ಯಕಾಲಿನಲ್ಲಿ ಉದಯಿಸಿದ ಅಪರೂಪದ ಚೇತನ ಬಸವಣ್ಣನವರು. ಅವರು ಅವತಾರಪುರುಷರು, ವಿಭೂತಿ ಪುರುಷರು, ಯುಗ ಪ್ರವರ್ತಕರು. ಅಂತಹ ಮಹಾನುಭಾವರನ್ನು ಪ್ರಾತಃ ಸ್ಮರಣೀಯರು ಶ್ರದ್ಧಾ ಭಕ್ತಿಯಿಂದ ಈಗಲೂ ಸ್ಮರಿಸುತ್ತೇವೆ. ಅವರ ಜೀವನಾದರ್ಶ ಎಂತಹದಾಗಿತ್ತು ಎಂಬುದನ್ನು ಬಸವಣ್ಣನವರ ಮಾತುಗಳಲ್ಲೇ ಹೇಳುವುದಾದರೆ…
ಹೊತ್ತಾರೆ ಎದ್ದು ಕಣ್ಣು ಹೊಸೆಯುತ್ತ,ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ- ಮಕ್ಕಳಿಗೆಂದು,ಕುದಿದೆನಾದಡೆ ಎನ್ನ ಮನಕ್ಕೆ ಮನವೇ ಸಾಕ್ಷಿ… ನಿಮ್ಮ ನಿಲುವಿಂಗೆ ಕುದಿವೆನಲ್ಲದೆ, ಎನ್ನೊಡಲವಸರಕ್ಕೆ ಕುದಿದೆನಾದಡೆ ತಲೆದಂಡ! ಕೂಡಲಸಂಗಮದೇವಾ ಹೊನ್ನಿನೊಳಗೊಂದೊರೆಯ ವಸ್ತ್ರದೊಳಗೊಂದೆಳೆಯ ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ! ನಿಮ್ಮ ಪುರಾತನರಾಣೆ !ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೇ ಕೂಡಲಸಂಗಮದೇವಾ..
-ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ



