ಅಂಕಣ
ಗುರು ಪ್ರೇರಣೆಯ ಕಾಯಕ ಪ್ರಜ್ಞೆಯು ನಮಗೆಲ್ಲಾ ಸ್ಫೂರ್ತಿಯಾಗಲಿ..!
ಜಾಗತಿಕ ಸಮಸ್ಯೆಯಾದ ಮಹಾ ಮಾರಿ ಕೊರೊನಾ ಹಿನ್ನಲೆಯಲ್ಲಿ ಕಳೆದ ಮೂರು ತಿಂಗಳಿಂದ ಭಕ್ತಾದಿಗಳಿಗೆ ಭರದ ನಾಡಿನ ಭಗೀರಥ, ಕನ್ನಡ ನಾಡಿನ ಜಲಋಷಿ, ಭವ್ಯ ಭಾರತದ ವಿದ್ವತ್ಪೂರ್ಣ ಮಹಾಗುರು ವಿಶ್ವ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ದರ್ಶನ ಸಾಧ್ಯವೇ ಆಗಿಲ್ಲ. ಕರ್ನಾಟಕ ಸರ್ಕಾರದ ಹಲವಾರು ಸಚಿವರು, ಉನ್ನತ ಅಧಿಕಾರಿಗಳು,ವಿವಿಧ ರಾಜ್ಯಗಳ ಶ್ರೀ ಮಠದ ಶಿಷ್ಯ ಬಂಧುಗಳು, ಭಕ್ತ ವೃಂದ ಶ್ರೀ ಜಗದ್ಗುರುಗಳವರ ದರ್ಶನಾಶೀರ್ವಾದಕ್ಕೆ ತೀವ್ರ ಪ್ರಯತ್ನಿಸಿದ್ದಾರೆ. ಸಾಮಾಜಿಕ ಅಂತರವನ್ನು ತಪೋವ್ರತದಂತೆ ಅನುಷ್ಠಾನದಲ್ಲಿ ನಿರತರಾಗಿರುವ ಶ್ರೀ ತರಳಬಾಳು ಜಗದ್ಗುರುಗಳವರು ಯಾರ ಭೇಟಿಗೂ ಅವಕಾಶವನ್ನು ನೀಡಿಲ್ಲ. ಈ ಮೂರ್ನಾಲ್ಕು ತಿಂಗಳ ಕಾಲದಲ್ಲಿ ಪೂಜ್ಯ ಶ್ರೀ ಜಗದ್ಗುರುಗಳವರು ಮೂರು ನಿಮಿಷವೂ ಕಾಲವ್ಯಯ ಆಗದಂತೆ ನಿರಂತರವಾಗಿ ಕಾಯಕ ಯೋಗಿಗಳಾಗಿ ರೈತರ ಅಭ್ಯುದಯಕ್ಕೆ ತೆರೆಮರೆಯಲ್ಲಿ ಶ್ರಮಿಸುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಗತ್ಯ ಸಲಹೆ ನೀಡುತ್ತಿರುವ ಶ್ರೀ ಜಗದ್ಗುರುಗಳವರು, ಕರ್ನಾಟಕ ಸರ್ಕಾರದ ಕೃಷಿ, ಕಂದಾಯ, ಜಲಸಂಪನ್ಮೂಲ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ನಿತ್ಯವೂ ಕೆರೆತುಂಬಿಸುವ ಯೋಜನೆಗಳು, ಬರ ಮತ್ತು ನೆರೆಯಿಂದ ಬೆಳೆಗಳಿಗೆ ಕುತ್ತು ಬಂದಾಗ ಸರ್ಕಾರ ನೀಡುವ ಪರಿಹಾರದಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ನಿಯಮಗಳ ಸೇರ್ಪಡೆ, ಕೃಷಿ ಮತ್ತು ಕಂದಾಯ ಇಲಾಖೆಯ ತಂತ್ರಾಂಶಗಳ ದೋಷಗಳನ್ನು ಸರಿಪಡಿಸಿ ಅನ್ನದಾತನಿಗೆ ನ್ಯಾಯ ಒದಗಿಸುವ ಕೈಂಕರ್ಯವನ್ನು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಹನ ಮತ್ತು ದೂರವಾಣಿ ಮೂಲಕ ಚರ್ಚಿಸಿ ಅದರ ಕಾರ್ಯಾನುಷ್ಠಾನಕ್ಕಾಗಿ ಬಿಡುವಿಲ್ಲದೇ ಶ್ರಮಿಸುತ್ತಿದ್ದಾರೆ.
ಭರದಿಂದ ಸಾಗುತಿದೆ, ಭರಮಸಾಗರ ಕೆರೆ ತುಂಬಿಸುವ ಪೈಪ್ ಲೈನ್ ಕಾಮಗಾರಿ
ಮಹಾಗುರುವಿನ ಕರೆಗೆ ತುಂಗೆಭದ್ರೆಯರು ಓಡೋಡಿ ಬರಲು ಕಾಲ ಸನ್ನಿಹಿತ
ಸ್ವಯಂ ನಿರ್ಬಂಧನದಲ್ಲಿರುವ ಶ್ರೀ ಜಗದ್ಗುರುಗಳವರು ಭರಮಸಾಗರ ಮತ್ತು ಬ್ಯಾಡಗಿ ತಾಲ್ಲೂಕು ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ನಿರಂತರವಾಗಿ ವರದಿ ಪರಿಶೀಲನೆ ಹಾಗೂ ಅತ್ಯಗತ್ಯ ಮಾರ್ಗದರ್ಶನ ದಯಪಾಲಿಸುತ್ತಿದ್ದಾರೆ.ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶಕ್ತಿಯ ಆಶೀರ್ವಾದ ಪೂರ್ವಕ ಮಾರ್ಗದರ್ಶನದ ರೈತಮುಖಿ ಯೋಜನೆಗಳಲ್ಲಿ ಒಂದಾದ ಭರಮಸಾಗರ ವ್ಯಾಪ್ತಿಯ ೪೦ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಸುಮಾರು 1200 ಕೋಟಿ ರೂಗಳ ಯೋಜನೆಯಡಿ ಭರಮಸಾಗರ ಕೆರೆಗೆ ಸೀಮಿತವಾಗಿ ನೇರ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯು ವೈಜ್ಞಾನಿಕ ಮಾನದಂಡದಡಿ ಭರದಿಂದ ಸಾಗುತ್ತಿದೆ. ಕೊರೊನಾ ಮಹಾಮಾರಿ ಸಮಸ್ಯೆ ಎದುರಾಗದಿದ್ದರೆ ಆಗಸ್ಟ್ ವೇಳೆಗೆ 900 ಎಕರೆಯಲ್ಲಿ ಪಸರಿಸಿರುವ ಭರಮಸಾಗರದ ದೊಡ್ಡ ಕೆರೆಯಲ್ಲಿ ತುಂಗಭದ್ರೆ ಅವಿರ್ಭವಿಸುತ್ತಿದ್ದಳು. ಆದರೂ ಕೆರೆ ತುಂಬಿಸುವ ಶ್ರೀ ಜಗದ್ಗುರುಗಳವರ ನಿರಂತರ ಒತ್ತಾಸೆಯ ಫಲವಾಗಿ ಪೈಪ್ ಲೈನ್ ಅಳವಡಿಕೆ ಕಾರ್ಯವು ತ್ವರಿತವಾಗಿ ಸಾಗುತ್ತಿದೆ. ಈ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಂಡರೆ ಭರಮಸಾಗರ ಕೆರೆ ತುಂಬಲು ಕೇವಲ 24 ದಿನ ಸಾಕಾಗುತ್ತದೆ. ಇದುವರೆಗಿನ ಯೋಜನೆಯಂತೆ ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ನೇರವಾಗಿ ನೀರು ತುಂಬಿಸುವ ಯೋಜನೆಯನ್ನು ಪರಿಷ್ಕರಿಸಲಾಗಿದೆ .ಒಮ್ಮೆ ನದಿಯಿಂದ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತರೆ ಪ್ರತಿ ಸೆಕೆಂಡಿಗೆ 2790 ಲೀಟರ್ ನೀರು ಹರಿದು ಬರುತ್ತದೆ. ರೈತ ಮೆಚ್ಚಿದ ಮಹಾಗುರುವಿನ ಕರೆಗೆ ತುಂಗೆಭದ್ರೆಯರು ಓಡೋಡಿ ಬರಲು ಕಾಲ ಸನ್ನಿಹಿತವಾಗಿರುವುದು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.
ಬ್ಯಾಡಗಿ ತಾಲ್ಲೂಕಿನ ಆಣೂರು-ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಸಾಕಾರದತ್ತ
ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಸಂದೇಶದೊಂದಿಗೆ ಸ್ಮರಿಸಿದ ಉತ್ತರ ಕರ್ನಾಟಕದ ಅನ್ನದಾತರು
ಕರುನಾಡಿನ ಭಗೀರಥ, ರೈತ ಮೆಚ್ಚಿದ ಮಹಾಗುರು, ಕರೆದರೆ ತುಂಗಭದ್ರೆಯರೂ ಜುಳು ಜುಳು ಶಬ್ದದೊಂದಿಗೆ ಸಂತಸದಿಂದ ಓಡೋಡಿ ಬಂದು ಪ್ರೋಕ್ಷಿಸುವ ಪ್ರತ್ಯಕ್ಷ ದೈವ ಮಹಾಸಾನಿಧ್ಯದ ಜಲಋಷಿ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೆರೆ ತುಂಬಿಸುವ ಯೋಜನೆಗಳಲ್ಲಿ ಒಂದಾದ, ಉತ್ತರ ಕರ್ನಾಟಕದ ಅನ್ನದಾತರಿಗೆ ನೆರವಾಗಲೇಬೇಕು ಎನ್ನುವ ಸದಾಶಯ ಸಂಕಲ್ಪದ ಏಲಕ್ಕಿ ಖ್ಯಾತಿಯ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಆಣೂರು ಮತ್ತು ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಯ 36 ಕೆರೆಗಳನ್ನು ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸುವ ಯೋಜನೆಯ ಕಾಮಗಾರಿಯು ವೇಗದಿಂದ ಸಾಗುತ್ತಿದೆ. ಬ್ಯಾಡಗಿ ತಾಲ್ಲೂಕು ಆಣೂರು ವ್ಯಾಪ್ತಿಯಲ್ಲಿನ ಕೆರೆಗಳನ್ನು ತುಂಬಿಸಲು 212 ಕೋಟಿ ರೂಗಳು ಹಾಗೂ ಬುಡಪನಹಳ್ಳಿ ವ್ಯಾಪ್ತಿಯಲ್ಲಿ ಕೆರೆಗಳಿಗೆ 157 ಕೋಟಿ ರೂಗಳು ಸೇರಿದಂತೆ ಒಟ್ಟು 369 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆ ಅರ್ಧದಷ್ಟು ಮುಕ್ತಾಯವಾಗಿದ್ದು. ಕೆರೆಯಿಂದ ಕೆರೆಗೆ ಪೈಪ್ ಲೈನ್ ಅಳವಡಿಸಲು ಈಗಾಗಲೇ ಬೃಹತ್ ಗಾತ್ರದ ಉತ್ತಮ ಗುಣಮಟ್ಟದ ಪೈಪ್ ಗಳನ್ನು ಹೊತ್ತ ಎಂಟು ಲಾರಿಗಳು ಕೆರೆ ಪಾತ್ರದ ಪ್ರದೇಶದಲ್ಲಿ ಬಂದಿವೆ. ಈ ದೃಶ್ಯವನ್ನು ಕಣ್ತುಂಬಿಕೊಂಡ ಈ ಭಾಗದ ರೈತ ಮುಖಂಡರು, ಹೋರಾಟಗಾರರು , ರೈತರು ಅಳಿತಪ್ಪಿ ಹೋಗಿ ಆರ್ಥಿಕ ಇಲಾಖೆಯಿಂದ ತಿರಸ್ಕೃತಗೊಂಡು, ಭ್ರಮನಿರಸರಾಗಿದ್ದ ಅನ್ನದಾತರಿಗೆ ಆಸರೆಯಾಗಿ ಯೋಜನೆಗೆ ಕರಣಾದಾರತ್ವ ವಹಿಸಿದ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಕಣ್ಣಾಲಿಗಳಿಂದ ಹರ್ಷಗೊಂಡು ಸಂದೇಶದ ಮೂಲಕ ಸ್ಮರಿಸುತ್ತಿದ್ದಾರೆ.
ಯೋಜನೆಯ ಹಿನ್ನೆಲೆ:
ಈ ಭಾಗದ ಕೆರೆಗಳು ಖಾಲಿಯಾಗಿ ಹತ್ತಾರು ವರ್ಷಗಳೇ ಕಳೆದಿದ್ದವು, ಹೀಗಾಗಿ ಅಂತರ್ಜಲ ಸಹ ಉಳಿದಿರಲಿಲ್ಲ. ತಾಲೂಕಿನಾದ್ಯಂತ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಶೇ.೯೦ ರಷ್ಟು ಕೆರೆಗಳು ಮಳೆಯನ್ನೇ ನಂಬಿಕೊಂಡು ಭರ್ತಿಯಾಗುತ್ತಿವೆ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದು ವ್ಯರ್ಥವಾಗಿ ಸಮುದ್ರಕ್ಕೆ ಹೋಗುತ್ತಿದ್ದರು ಆ ನೀರನ್ನು ಕೆರೆಗಳಿಗೆ ಹರಿಸುವ ಇಚ್ಛಾಶಕ್ತಿ ನಮ್ಮ ನೇತಾರರಿಗೆ ಇಲ್ಲದಿರುವುದರಿಂದ ಜನ -ಜಾನುವಾರುಗಳು ಪರಿತಪಿಸುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಆಣೂರು ಮತ್ತು ಬುಡಪನಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಈ ಭಾಗದ ಜನತೆ ದಶಕಗಳ ಕಾಲದಿಂದ ಹೋರಾಟ ಮಾಡಿದರು ಅದು ಕೈಗೂಡಿರಲಿಲ್ಲ. ಅನೇಕ ಬಾರಿ ಆಣೂರು ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆದಿರುವ ಪತ್ರ ಚಳವಳಿ ತೀವ್ರ ಕಾವು ಪಡೆದುಕೊಂಡಿತ್ತು. ರೈತ ಸಂಘ ಹಾಗೂ ಸಾರ್ವಜನಿಕರು ಉಪವಾಸ ಸತ್ಯಾಗ್ರಹ,ರಸ್ತೆ ತಡೆ ಸೇರಿದಂತೆ ಶಾಲೆಯ ಮಕ್ಕಳೂ ಸಹ ಬೀದಿಗಿಳಿದು ಹೋರಾಟ ನಡೆಸಿದ್ದರು. ಅನೇಕ ಬಾರಿ ಮುಖ್ಯಮಂತ್ರಿಗಳಿಗೆ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಅನುಷ್ಠಾನಗೊಳಿಸಲು ಸಾಧ್ಯವೇ ಆಗಿರಲಿಲ್ಲ.ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಯು ಮುಖ್ಯಮಂತ್ರಿಗಳ ಟಿಪ್ಪಣಿ ಹೊರತಾಗಿಯೂ, ಆರ್ಥಿಕ ಇಲಾಖೆಯು ಆಣೂರು ಮತ್ತು ಬುಡಪನಹಳ್ಳಿ ವ್ಯಾಪ್ತಿಯಲ್ಲಿ ಮಳೆ ಚೆನ್ನಾಗಿ ಆಗಿರುವ ಕಾರಣದಿಂದ ಈ ಯೋಜನೆಯ ವರದಿಯನ್ನು ತಿರಸ್ಕಾರ ಮಾಡಿತ್ತು. ಈ ಭಾಗದ ಎಲ್ಲಾ ರೈತ ಮುಖಂಡರು ಹಾಗೂ ಹೋರಾಟ ಸಮಿತಿಯವರು ತಮ್ಮ ಅಳಲು ತೋಡಿಕೊಂಡ ಸಿರಿಗೆರೆಯ ಶ್ರೀ ಜಗದ್ಗುರುಗಳವರ ಸದ್ದರ್ಮ ನ್ಯಾಯಪೀಠಕ್ಕೆ ಅಹವಾಲು ಸಲ್ಲಿಸಿದ್ದರು.ಮನವಿ ಆಲಿಸಿ ವಿಷಯದ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ ಶ್ರೀಜಗದ್ಗುರುಗಳು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಯೋಜನೆಯು ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್(ಡಿಪಿಆರ್).ಆಗಿರುವುದಿಲ್ಲ ಎಂಬುದು ತಿಳಿದು ಬಂದಿತು. ಆಗ ಶ್ರೀಜಗದ್ಗುರುಗಳವರು ಸಮಿತಿಯವರಿಗೆ ರೈತರು ಹೋರಾಟ ನಿಲ್ಲಿಸುವುದು ಬೇಡ “ಜೀವ ಬಿಟ್ಟೇವು ಜೀವ ಜಲ ಬಿಡಲಾರೆವು” ಎಂಬ ಘೋಷಣೆಯೊಂದಿಗೆ ನಿಮ್ಮ ಹೋರಾಟ ನಿರಂತರವಾಗಿರಲಿ ನಿಮ್ಮ ಹೋರಾಟದ ಬೆಂಗಾವಲಾಗಿ ನಾವು ಇದ್ದು, ಸಂಬAಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಯೋಜನೆಯನ್ನು ರೂಪಿಸಿ ಪರಿಹಾರ ಕಂಡುಕೊಳ್ಳವ ಕುರಿತು ಕಾರ್ಯಮಗ್ನರಾಗುವುದಾಗಿ ತಿಳಿಸಿ ಆಶೀರ್ವದಿಸಿದ್ದರು.
ಯೋಜನೆಯನ್ನು ಸಮಗ್ರವಾಗಿ ಅಧ್ಯಯನದೊಂದಿಗೆ,ಯೋಜನೆಯಲ್ಲಿ ಕೆಲ ಅಂಶಗಳನ್ನು ಪರಿಷ್ಕರಿಸಿ ನೀರಾವರಿ ನಿಗಮದ ಎಂಜಿನಿಯರ್ ಗಳಿಗೆ ಸೂಕ್ತ ಸಲಹೆ ನೀಡಿದ ತರುವಾಯ ಈ ಯೋಜನೆಯು ಮುಂದೆ ಸಾಗಿತು.ನಿರಂತರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಂವಹನ ನಡೆಸಿ ತುಂಗಭದ್ರಾ ನದಿಯ ಸಮೀಪದ ಪ್ರದೇಶವಾದ ಕೋಟೇಹಾಳ್ ನಲ್ಲಿ ಜಾಕ್ವೆಲ್ ನಿರ್ಮಿಸಿ, ಈ ಜಾಕ್ವೆಲ್ ಮೂಲಕ ನದಿ ನೀರನ್ನು ನೇರವಾಗಿ ನೀರನ್ನು ಮೇಲೆತ್ತುವ ರೇಚಕ ಚಕ್ರ ದ ಸಹಾಯದಿಂದ ಆಣೂರು ಕೆರೆಗೆ ನೇರವಾಗಿ ಹರಿಸಿ ತದನಂತರ ಗುರುತ್ವಾಕರ್ಷಣೆ ಶಕ್ತಿಯ ಬಲದ ಮೂಲಕ ಯೋಜನೆಯ ಶಿಡನೂರು,ಹಿರೇನಂದಿಹಳ್ಳಿ, ಬಿದರಕಟ್ಟಿ,ತಡಸಾ,ಮತ್ತೂರು,ನೆಲ್ಲಿಕೊಪ್ಪ,ಮಾಸಾನಿಗಿ,ತಿಮ್ಕಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ೩೫ ಕೆರೆಗಳನ್ನು ತುಂಬಿಸುವ ಪರಿಷ್ಕರಿಸಿದ,ರೈತ ಹಿತಕಾಯುವ ಈ ಯೋಜನೆಯನ್ನು ಶ್ರೀ ಜಗದ್ಗುರುಗಳವರು ರೈತ ಹಿತಕಾಯುವ ಈ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳಿಗೆ ಸೂಚಿಸಿದ ತತ್ಪರಿಣಾಮವಾಗಿ ೩೬ ಕೆರೆಗಳನ್ನು ತುಂಬಿಸುವ ೩೫೯ ಕೋಟಿ ರೂಗಳ ಈ ಯೋಜನೆಗೆ ಹಣ ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆ ಮುಗಿದು,ಕಾಮಗಾರಿ ಭರದಿಂದ ಜರುಗುತ್ತಿದೆ.
ಯೋಜನೆಯನ್ನು ಸಮಗ್ರವಾಗಿ ಅಧ್ಯಯನದೊಂದಿಗೆ, ಕೆಲ ಅಂಶಗಳನ್ನು ಪರಿಷ್ಕರಿಸಿ ನೀರಾವರಿ ನಿಗಮದ ಎಂಜಿನಿಯರ್ ಗಳಿಗೆ ಸೂಕ್ತ ಸಲಹೆ ನೀಡಿದ ತರುವಾಯ ಈ ಯೋಜನೆಯು ಮುಂದೆ ಸಾಗಿತು.ನಿರಂತರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಂವಹನ ನಡೆಸಿ ಈ ಯೋಜನೆಯನ್ನು ಆಣೂರು ಮತ್ತು ಬುಡಪನಹಳ್ಳಿಯ ಎರಡು ಏತ ನೀರಾವರಿ ಯೋಜನೆಗಳಾಗಿ ವಿಭಾಗಿಸಲಾಗಿದೆ.
ಆಣೂರು ಏತ ನೀರಾವರಿ ಯೋಜನೆ
212 ಕೋಟಿ ರೂಗಳ ವೆಚ್ಚದ ಆಣೂರು ಯೋಜನೆಯು, ತುಂಗಭದ್ರಾ ನದಿಯ ಸಮೀಪದ ಪ್ರದೇಶವಾದ ಕೋಟೇಹಾಳ್ ನಲ್ಲಿ ಜಾಕ್ವೆಲ್ ನಿರ್ಮಿಸಿ, ಈ ಜಾಕ್ವೆಲ್ ಮೂಲಕ ನದಿ ನೀರನ್ನು ನೇರವಾಗಿ ನೀರನ್ನು ಮೇಲೆತ್ತುವ ರೇಚಕ ಚಕ್ರ ದ ಸಹಾಯದಿಂದ ಆಣೂರು ಕೆರೆಗೆ ನೇರವಾಗಿ ಹರಿಸಿ ತದನಂತರ ಗುರುತ್ವಾಕರ್ಷಣೆ ಶಕ್ತಿಯ ಬಲದ ಮೂಲಕ ಯೋಜನೆಯ ೧೮ ಕೆರೆಗಳಿಗೆ ನೀರು ಹರಿದು ಬರಲಿದೆ.
ಬುಡಪನಹಳ್ಳಿ ಏತ ನೀರಾವರಿ ಯೋಜನೆ
ಬುಡಪನಹಳ್ಳಿ ಏತ ನೀರಾವರಿ ಯೋಜನೆಗೆ ೧೫೭ ಕೋಟಿ ರೂಗಳು ಖರ್ಚಾಗಲಿದ್ದು, ತುಂಗಭದ್ರಾ ನದಿ ಸನಿಹದಲ್ಲಿರುವ ಕಲ್ಲೇದೇವರ ಗುಡ್ಡದ ಬಳಿ ಜಾಕ್ವೆಲ್ ಹೊಂದಿದ್ದು, ಈ ಜಾಕ್ವೆಲ್ ಮೂಲಕ ನದಿ ನೀರನ್ನು ನೇರವಾಗಿ ನೀರನ್ನು ಮೇಲೆತ್ತುವ ರೇಚಕ ಚಕ್ರದ ಸಹಾಯದಿಂದ ಬುಡಪನಹಳ್ಳಿ ಕೆರೆಗೆ ತುಂಗಭದ್ರೆಯರು ಹರಿದು ನಂತರ ಗುರುತ್ವಾಕರ್ಷಣೆ ಶಕ್ತಿಯ ಬಲದ ಮೂಲಕ ಯೋಜನೆಯ ಶಿಡನೂರು,ಹಿರೇನಂದಿಹಳ್ಳಿ, ಬಿದರಕಟ್ಟಿ,ತಡಸಾ,ಮತ್ತೂರು ನೆಲ್ಲಿಕೊಪ್ಪ,ಮಾಸಾನಿಗಿ,ತಿಮ್ಕಾಪುರ ಸೇರಿದಂತೆ ಇನ್ನಿತರ ಗ್ರಾಮಗಳ 17 ಕೆರೆಗಳನ್ನು ತುಂಬಿಸುವ ಪರಿಷ್ಕರಿಸಿದ, ರೈತ ಹಿತಕಾಯುವ ಈ ಯೋಜನೆಯನ್ನು ಶ್ರೀ ಜಗದ್ಗುರುಗಳವರು ರೈತ ಹಿತಕಾಯುವ ಈ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳಿಗೆ ಸೂಚಿಸಿದ ತತ್ಪರಿಣಾಮವಾಗಿ ೩೬ ಕೆರೆಗಳನ್ನು ತುಂಬಿಸುವ ೩೫೯ ಕೋಟಿ ರೂಗಳ ಈ ಯೋಜನೆಗೆ ಹಣ ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆ ಮುಗಿದು,ಕಾಮಗಾರಿ ಭರದಿಂದ ಜರುಗುತ್ತಿದೆ.
ಬ್ಯಾಡಗಿ ತಾಲ್ಲೂಕು ಅನ್ನದಾತರ ಕನಸಿನ ಯೋಜನೆಗೆ ಆಶೀರ್ವಾದದ ಸಹಕಾರ ನೀಡಿದ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಈ ಭಾಗದ ರೈತಬಂಧುಗಳು ಭಕ್ತಿಯಿಂದ ನೆನೆಯುತ್ತಿರುವುದಲ್ಲದೆ. ಯೋಜನೆ ಸಾಕಾರಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಸಿರಿಗೆರೆಯಿಂದ ಆರು ಕಿ.ಮಿ ದೂರದಲ್ಲಿರುವ ನೂರಾರು ಎಕರೆ ಭೂ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಪ್ರಶಾಂತಿಯ ತಾಣವಾದ ಶಾಂತಿವನದ ನಿವಾಸದಲ್ಲಿರುವ ಶ್ರೀ ಜಗದ್ಗುರುಗಳವರು ತಮ್ಮ ಕರಕಮಲಗಳಿಂದ ಬಾಳೆ, ಟೊಮೇಟೋ, ಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಪೋಷಿಸುತ್ತಿರುವುದು,ಅಲ್ಲಿನ ಸಾಕು ಪ್ರಾಣಿಗಳಿಗೆ ಆಹಾರ ಮತ್ತು ನೀರು ಒದಗಿಸುವುದು ಶ್ರೀಜಗದ್ಗುರುಗಳವರ ನಿತ್ಯ ಕಾರ್ಯವಾಗಿದೆ. ಗುರು ಪ್ರೇರಣೆಯ ಕಾಯಕ ಪ್ರಜ್ಞೆಯು ನಮಗೆಲ್ಲಾ ಸ್ಪೂರ್ತಿಯಾಗಲಿ!
-ಬಸವರಾಜ,ಸಿರಿಗೆರೆ
ಮೊ: 7975961874
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com