ಡಿವಿಜಿ ಸುದ್ದಿ, ದಾವಣಗೆರೆ: ಸಾಮಾನ್ಯವಾಗಿ ರೈತರು ಕೆರೆ ಮಣ್ಣನ್ನು ಎಲ್ಲಾ ತೋಟಗಳಿಗೆ ಹಾಕ್ತಾರೆ. ಆದರೆ, ಈ ಮಣ್ಣು ಅಡಿಕೆ ಬೆಳೆಗೆ ಪೂರಕವಾಗಿಲ್ಲ. ಈ ಮಣ್ಣಿನಿಂದ ಅಡಿಕೆ ಬೆಳೆಗೆ ಹಿಡಿಮುಂಡಿ ರೋಗ ಕಾಣಿಸಿಕೊಳ್ಳುತ್ತದೆ.
ಹಿಡಿಮುಂಡಿಗೆ ಬಾಧೆಯು ಒಂದು ಶಾರೀರಿಕ ಅವ್ಯವಸ್ಥೆಯಾಗಿದ್ದು, ಇದಕ್ಕೆ ಪಟ್ಟಿರೋಗ ಎಂತಲೂ ಕರೆಯುತ್ತಾರೆ. ಈ ಬಾಧೆಯನ್ನು ತಡೆಯಲು ರೈತರು ಕೆಳಕಂಡಂತೆ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ.
ಕೆರೆಯ ಮಣ್ಣನ್ನು ಹೆಚ್ಚಾಗಿ ಅಡಿಕೆ ತೋಟಕ್ಕೆ ಬಳಸುವುದರಿಂದ ಬೇರುಗಳಿಗೆ ಉಸಿರಾಟದ ತೊಂದರೆಯಾಗುವುದರಿಂದ, ಟ್ರಾಕ್ಟರ್ಗಳ ಉಳುಮೆಯಿಂದ ಬೇರುಗಳಿಗೆ ಹಾನಿಯಾಗುವುದರಿಂದ ಹಾಗೂ ಮಣ್ಣು, ನೀರು, ಪೋಷಕಾಂಶಗಳ ನಿರ್ವಹಣೆಯ ಕೊರತೆಯಿಂದಾಗಿ ಕೂಡ ಈ ರೋಗವು ಕಂಡುಬರುತ್ತದೆ.
ಎಲೆಗಳ ಗಾತ್ರ ಚಿಕ್ಕದಾಗಿ ಹಸಿರು ಬಣ್ಣಕ್ಕೆ ತಿರುಗುತ್ತವೆ. ಗಣ್ಣುಗಳ ನಡುವಿನ ಅಂತರ ಕಡಿಮೆಯಾಗುತ್ತವೆ. ಸುಳಿ ಎಲೆಗಳು ಒತ್ತೊತ್ತಾಗಿ ಕಂಡುಬರುತ್ತವೆ. ತುತ್ತಾದ ಅಡಿಕೆ ಮರಗಳು ಚೆನ್ನಾಗಿ ಫಲ ಕಚ್ಚುವುದಿಲ್ಲ. ಹೊಂಬಾಳೆಗಳು ಹೊರಬಂದಲ್ಲಿ ಗಾತ್ರದಲ್ಲಿ ಚಿಕ್ಕದಾಗಿ ಇರುತ್ತವೆ. ಈ ತೊಂದರೆಯು ಹೆಚ್ಚಾಗಿ ಬಯಲುಸೀಮೆ ಪ್ರದೇಶಗಳಾದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಇದರ ಹತೋಟಿಗಾಗಿ ಕೆರೆಯ ಮಣ್ಣನ್ನು ಅಡಿಕೆ ತೋಟಕ್ಕೆ ಬಳಸಬಾರದು.
ಟ್ರಾಕ್ಟರ್ ಉಳುಮೆ ಮಾಡುವ ಸಂದರ್ಭದಲ್ಲಿ ಅಡಿಕೆ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನೀರು ಬಸಿದು ಹೋಗಲು ಬಸಿಗಾಲುವೆಗಳನ್ನು ನಿರ್ಮಿಸಬೇಕು. ಮಣ್ಣಿನ ನಿರ್ವಹಣೆಯನ್ನು ಚೆನ್ನಾಗಿ ನೋಡಿಕೊಂಡು ಸಾವಯವ ಗೊಬ್ಬರಗಳ ಬಳಕೆ ಮಾಡಬೇಕು. ಅಲ್ಲದೇ ಮಣ್ಣು ಪರೀಕ್ಷೆ ಮಾಡಿಸಿ ಅವಶ್ಯಕತೆಗೆ ತಕ್ಕಂತೆ ಪೋಷಕಾಂಶಗಳನ್ನು ಒದಗಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ, ದಾವಣಗೆರೆ ಇಲ್ಲಿಗೆ ಸಂಪರ್ಕಿಸಬಹುದೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್ ತಿಳಿಸಿದ್ದಾರೆ.