ಡಿವಿಜಿ ಸುದ್ದಿ, ತುಮಕೂರು: ನನಗೆ ಪಾರ್ಟಿ ಆಫರ್ ಬಂದಿರೋದು ಬರೀ ರಾಜಕೀಯದಿಂದ ಮಾತ್ರ. ಅದು ಬಿಟ್ಟು ಬೇರೆ ಪಾರ್ಟಿಯ ಆಫರ್ ನನಗೆ ಬಂದಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ಇರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾಲ್ಕು ಜನರು ಕೂತು ಖುಷಿಯಿಂದ ಮಾತನಾಡುವುದಕ್ಕೆ ಪಾರ್ಟಿ ಎನ್ನುತ್ತಾರೆ. ಎಲ್ಲಾ ಪಾರ್ಟಿಗಳು ಒಂದೇ ರೀತಿ ಇರಲ್ಲ ಎಂದು ಹೇಳಿದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಪ್ರೊಡಕ್ಷನ್‌ನಲ್ಲಿ ಟೀ, ಕಾಫಿ ಕೊಡುತ್ತಾರೆ. ಅದನ್ನೇ ಕುಡಿದು, ತಿಂದುಕೊಂಡು 26 ವರ್ಷದಿಂದ ಜೀವನ ಸಾಗಿಸಿದ್ದೇವೆ. ಬೇರೆ ಏನು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರುವ ವಿಚಾರವನ್ನು ಮಾತನಾಡುವುದು ತಪ್ಪು, ಇದರ ಬಗ್ಗೆ ನನಗೆ ಗೊತ್ತಿಲ್ಲ. ಮನೆ, ಶೂಟಿಂಗ್ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದರು.

ಇಂದ್ರಜಿತ್ ಜೊತೆ ಬಂದಿರುವುದರ ಬಗ್ಗೆ ಕೇಳಿದ್ದಕ್ಕೆ, ಇಂದ್ರಜಿತ್ ಜೊತೆ ಬಂದಿರುವುದಕ್ಕೆ ಬೇರೆ ಅರ್ಥ ಬೇಡ. ಇಂದ್ರಜಿತ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಪರಿಚಯ ಇದ್ದಾರೆ. ಅಲ್ಲದೇ ಮಠಕ್ಕೆ ಅವರ ಒಡನಾಟ ಇತ್ತು. ಹೀಗಾಗಿ ಜೊತೆಗೆ ಬಂದಿದ್ದೇವೆ ಎಂದರು.
ಹುಟ್ಟುಹಬ್ಬದ ವಿಶೇಷ ಎಂದು ಬಂದಿಲ್ಲ, ಪ್ರತಿದಿನಲೂ ವಿಶೇಷನೇ. ಆದರೆ ತುಂಬಾ ದಿನದಿಂದ ಮಠಕ್ಕೆ ಬರಬೇಕು ಅಂದುಕೊಂಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಈಗ ಎರಡು ದಿನ ಬೆಂಗಳೂರಿಗೆ ಬಂದಿದ್ದೆ. ಹೀಗಾಗಿ ಇಲ್ಲಿಗೂ ಬಂದಿದ್ದೇನೆ. ನಾಲ್ಕು ತಿಂಗಳ ಹಿಂದೆಯೇ ಸಿದ್ದಗಂಗಾ ಮಠಕ್ಕೆ ಬರಬೇಕು ಎಂದು ಇಂದ್ರಜಿತ್ ಅವರಿಗೆ ಹೇಳಿದ್ದೆ. ಎರಡು ದಿನಗಳ ಹಿಂದೆಯೇ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದೆ. ಹೀಗಾಗಿ ಇಂದ್ರಜಿತ್ ಬಂದಿದ್ದಾರೆ ಎಂದರು.
ಚಿತ್ರರಂಗ ಬಹಳ ದೊಡ್ಡದು. ಬಹಳ ಹಿರಿಯರು, ಕಲಾವಿದರು ಸೇರಿ ಕೆತ್ತಿದ ಒಂದು ಅದ್ಭುತವಾದ, ಸುದೀರ್ಘವಾದ ಪ್ರಚಂಚ. ಅದು ಕೂಡ ಸಾಕಷ್ಟು ನೋವು, ಕಷ್ಟ ನೋಡಿ ಇಲ್ಲಿಯವರೆಗೂ ಬಂದಿರೋದು. ಯಾವುದೋ ಒಂದು ಸಣ್ಣ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.
ಈ ವೇಳೆ ಮಾತನಾಡಿದ ಇಂದ್ರಜಿತ್, ನಾವು ತ್ರಿವಿಧ ದಾಸೋಹ ನೀಡಿದ ಪುಣ್ಯ ಕ್ಷೇತ್ರದಲ್ಲಿದ್ದೇವೆ. ಇಂತಹ ಕ್ಷೇತ್ರದಲ್ಲಿ ಡ್ರಗ್ಸ್ ವಿಚಾರ ಮಾತನಾಡುವುದು ಸರಿಯಲ್ಲ. ನಿನ್ನೆಯೇ ಎಲ್ಲಾ ವಿಚಾರವನ್ನು ಹೇಳಿದ್ದೇನೆ . ನನ್ನ ಗೆಳೆಯ ಸುದೀಪ್ ಅವರ ಹುಟ್ಟುಹಬ್ಬವನ್ನು ಸಿದ್ದಗಂಗಾ ಮಠದಲ್ಲಿ ಕಳೆಯುತ್ತಿರುವುದು ನನಗೆ ಖುಷಿ ತಂದಿದೆ. ಅವರನ್ನು ಭಗವಂತ ಕಾಪಾಡಿ, ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಿ ಎಂದರು.