ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಆಗಲಿದೆ. ಖಾತೆ ಹಂಚಿಕೆ ಪಟ್ಟಿಯನ್ನು ನಾಳೆ ರಾಜ್ಯಪಾಲರಿಗೆ ಕಳುಹಿಸಲಿದ್ದು, ರಾಜ್ಯಪಾಲರಿಂದ ಅಂಕಿತ ಬಿದ್ದ ನಂತರ ಖಾತೆ ಹಂಚಿಕೆ ಆಗಲಿದೆ. ಇದರ ಜತೆಗೆ ನಾಳೆ ಸಂಜೆ ಸಂಪುಟ ಸಭೆ ಕೂಡ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಖಾತೆ ಹಂಚಿಕೆ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಸಿ.ಎಂ. ಯಡಿಯೂರಪ್ಪ, ನಾಳೆ ಬೆಳಗ್ಗೆಯೇ ರಾಜ್ಯಪಾಲರಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಕಳಿಸಿಕೊಡುತ್ತೇವೆ. ರಾಜ್ಯಪಾಲರು ಒಪ್ಪಿಗೆ ನೀಡಿದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎಂದ್ರು.
ಡಿಸಿಎಂ ಹುದ್ದೆಗೆ ಹೈಕಮಾಂಡ್ ಒಲವು
ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನಿ ಅವರು ಒಲವು ತೋರಿಸಿದ್ದಾರೆ. ರಾಷ್ಟ್ರೀಯ ನಾಯಕರ ನಿರ್ದೇಶನ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಆಗಲಿದೆ. ಆದರೆ, ಎಷ್ಟು ಡಿಸಿಎಂ ಹುದ್ದೆ ಇರಲಿದೆ ಎಂಬುದು ನಾಳೆ ನಿರ್ಧಾರ ಆಗಲಿದೆ. ಬೆಳಗಾವಿ ಜಿಲ್ಲೆಗೆ ಮತ್ತೊಂದು ಡಿಸಿಎಂ ಹುದ್ದೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಆ ಭಾಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ನಿರ್ಧಾರನ್ನು ರಾಷ್ಟೀಯ ನಾಯಕರು ತಗೆದುಕೊಂಡಿದ್ದು, ಇದಕ್ಕೆ ಎಲ್ಲರು ಬದ್ಧವಾಗಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲ ಒಟ್ಟಾಗಿದ್ದೇವೆ. ಗೊಂದಲವೇನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿದೆ ಎಂದ್ರು.