ಡಿವಿಜಿ ಸುದ್ದಿ, ದಾವಣಗೆರೆ: ನನ್ನ ಮೇಲೆ ಕಾಂಗ್ರೆಸ್ಸಿಗರು ಪ್ರಕರಣ ದಾಖಲಿಸುವ ಮೂಲಕ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಇದು ನನಗೆ ಇನ್ನಷ್ಟು ಕೆಲಸ ಮಾಡಲು ಆಶೀರ್ವಾದವಾಗಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಚಿಕಿತ್ಸೆಗೆ ಸ್ಪಂದಿಸದ ತಬ್ಲೀಘಿಗಳನ್ನು ಗುಂಡಿಕ್ಕಿ ಕೊಂದರೂ ತಪ್ಪಲ್ಲ ಎಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷಚಂದ್ರ ಕೆಟಿಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹೋರಾಟದ ಮೂಲಕವೇ ಶಾಸಕನಾಗಿದ್ದೇನೆ. ಕಾಂಗ್ರೆಸ್ ಸರ್ಕಾರ ಇದ್ದಾಗ 2003ರಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದಾಗ ನನ್ನನ್ನು ಬಂಧಿಸಿ 15 ದಿನಗಳ ಕಾಲ ಬೆಳಗಾವಿ ಜೈಲಿನಲ್ಲಿಟ್ಟಿದ್ದರು. ಹೀಗಾಗಿ ಕಾಂಗ್ರೆಸ್ಸಿಗರು ಕೇಸ್ ದಾಖಲಿಸಿದರೆ ನನ್ನ ಮನೋ ಸ್ಥೈರ್ಯ ಕುಗ್ಗುವುದಿಲ್ಲ ಎಂದರು.
ಚುನಾವಣೆಗೆ 15 ದಿನಗಳಿರುವಾಗ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ವಿ.ಎಚ್.ಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಕ್ಕೆ ನನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸಿದ್ದರು. ಕಾಂಗ್ರೆಸ್ ನಾಯಕರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ ಜೈಲಿಗೆ ಕಳುಹಿಸುವುದಾದರೆ ಕಳಿಸಲಿ ಎಂದರು.



