ದಾವಣಗೆರೆ: ರೈಲಿನಲ್ಲಿ ಬಿಟ್ಟು ಹೋಗಿದ್ದ 2.80 ಲಕ್ಷ ಮೌಲ್ಯದ ಬ್ಯಾಗ್ ಅನ್ನು ಹಿಂತಿರುಗಿಸಿ ಧರ್ಮಸ್ಥಳ ಸಂಘದ ಅಧಿಕಾರಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ರಾಮೇಶ್ವರ -ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಹಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದರು.
ಬೆಂಗಳೂರಿನ ಟಿ. ದಾಸರಹಳ್ಳಿಯ ನಿವಾಸಿ ಎಸ್.ಎಸ್.ಸುಧಾಕರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರು 2.80 ಲಕ್ಷ ಹಾಗೂ ಬಟ್ಟೆಗಳಿರುವ ಬ್ಯಾಗ್ ಬಿಟ್ಟು ಬದಲಿಗೆ ಮತ್ತೊಂದು ಬ್ಯಾಗನ್ನು ತೆಗೆದುಕೊಂಡು ಬೀರೂರು ರೈಲು ನಿಲ್ದಾಣದಲ್ಲಿ ಇಳಿದು ಹೋದರು. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಧರ್ಮಸ್ಥಳ ಸಂಘದ ದಾವಣಗೆರೆ ಗ್ರಾಮಾಂತರ ವಿಭಾಗದ ಲೆಕ್ಕ ಪರೀಕ್ಷಕ ಜಗದೀಶ್ ಅವರ ಕೈಗೆ ಸಿಕ್ಕಿದೆ. ಆ ಬ್ಯಾಗ್ ಅನ್ನು ತೆರೆಯದೇ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು.
ರೈಲ್ವೆ ಪೊಲೀಸ್ ಠಾಣೆಯ ಎಸ್‌ಐ ಕೆ.ಟಿ. ಅಣ್ಣಯ್ಯ ಮಾರ್ಗದರ್ಶನದಲ್ಲಿ ಎಎಸ್‌ಐ ಜಿ. ನಾಗರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮಂಜುನಾಥ ವಿ, ಆನಂದಪ್ಪ ಕೆ., ಅರುಣ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ವಿನೋದ್ ಕುಮಾರ್ ಅವರು ಬ್ಯಾಗ್ ಅನ್ನು ತೆರೆದು ನೋಡಿದಾಗ ಹಣವಿರುವುದು ಗೊತ್ತಾಯಿತು. ಬ್ಯಾಗ್‌ನಲ್ಲಿ ನಕಾಶೆಯೊಂದು ಇದ್ದು, ಅವರಲ್ಲಿ ಎಂಜಿನಿಯರ್ ವಿಳಾಸವನ್ನು ಗೂಗಲ್ ಸರ್ಚ್ ಮಾಡಿ ನಕಾಶೆ ಬರೆಸಿಕೊಂಡವರ ವಿಳಾಸ ಪತ್ತೆ ಹಚ್ಚಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಸುಧಾಕರ್ ಅವರನ್ನು ಠಾಣೆಗೆ ಕರೆಸಿಕೊಂಡು ಬ್ಯಾಗ್ ಖಚಿತಪಡಿಸಿಕೊಂಡು ಹಿಂತಿರುಗಿಸಿದರು.ಮನೆ ಕಟ್ಟಿಸಲು ಸ್ನೇಹಿತರೊಬ್ಬರಿಂದ ಸಾಲ ಮಾಡಿ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದರು.